ಜಿಲ್ಲೆ

ಗರ್ಭಿಣಿಯರ ನಿರಂತರ ಕಾಳಜಿ ವಹಿಸಿ

ಬಳ್ಳಾರಿ : ಗರ್ಭಿಣಿ ಮಹಿಳೆಯರು ಪ್ರತಿ ತಿಂಗಳು ತಪಾಸಣೆಗೆ ಬಂದಾಗ, ಅವರು ಕೈಗೊಳ್ಳಬೇಕಾದ ಕಾಳಜಿ ಕುರಿತು ತಿಳಿಸುವ ಮೂಲಕ ತಾಯಿ ಮರಣ ತಡೆಗಟ್ಟಲು ಕ್ರಮವಹಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಮಾತನಾಡಿದರು. ಯಾವುದೇ ಕುಟುಂಬದಲ್ಲಿ ಗರ್ಭಿಣಿ ಮಹಿಳೆಯನ್ನು ಹೆರಿಗೆ ಕಾರಣದಿಂದ ಕಳೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಗರ್ಭಿಣಿ ಮಹಿಳೆಯರ ಕೈಗೊಳ್ಳಬೇಕಾದ ಕಾಳಜಿ ಮತ್ತು ಜೊತೆಗೆ ಕಂಡುಬರಬಹುದಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಗರ್ಭಿಣಿ ಎಂದು ತಿಳಿದ ದಿನದಿಂದ ಹೆರಿಗೆಯಾಗುವವರೆಗೆ ಮತ್ತು ಹೆರಿಗೆ ನಂತರದ 45 ದಿನಗಳ ಕಾಲ ಬಾಣಂತಿಯ ಅವಧಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತಹೀನತೆ ಮುಂತಾದವುಗಳಿಅದ ಗಂಭೀರತೆ ಉಂಟಾಗದಅತೆ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.
ಡಿಎಚ್‌ಒ ಡಾ. ವೈ. ರಮೇಶ್‌ಬಾಬು ಮಾತನಾಡಿ, ಜಿಲ್ಲಾದ್ಯಂತ ತಾಯಿ ಮತ್ತು ಶಿಶು ಮರಣ ತಡೆಗೆ ಮೂರು ಹಂತದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೆರಿಗೆ ಕೊಠಡಿ ವಾರ್ಡ್‌ಗಳ ಪರಿಶೀಲನೆ ಹಾಗೂ ಸಾಧ್ಯವಿರಬಹುದಾದ ಸೋಂಕುಗಳನ್ನು ಗುರ್ತಿಸಲು ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್ ಪ್ರಸೂತಿ ತಜ್ಞರ ಮೂಲಕ ಸಮಾಲೋಚನಾ ಸಭೆ ನಡೆಸಲಾಗುತ್ತಿದೆ ಮತ್ತು ಎಲ್ಲ ತಾಲೂಕಗಳಲ್ಲಿ ಕ್ಷೇತ್ರ ಮಟ್ಟದ ಸಿಬ್ಬಂದಿಯೊಂದಿಗೆ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ನಾಯಿಕಡಿತ ಪ್ರಕರಣಗಳ ಸಂದರ್ಭಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಔಷಧಿ ದಾಸ್ತಾನು ಕೊರತೆಯಾಗದಂತೆ ಮತ್ತು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಜೊತೆಗೆ ಶಸ್ತಚಿಕಿತ್ಸಾ ಶಿಬಿರಗಳಲ್ಲಿ ಹೆಚ್ಚಿನ ಫಲಾನುಭವಿಗಳು ಬರುವಂತೆ ಕ್ರಮವಹಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಪತ್ರ ಬಿಡುಗಡೆ: ಇದೇ ಸಂದರ್ಭದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಹಾಗೂ ರೇಬೀಸ್ ಕುರಿತು ಪತ್ರ ಬಿಡುಗಡೆ ಮಾಡಿದರು.