ಬಳ್ಳಾರಿ : ಗರ್ಭಿಣಿ ಮಹಿಳೆಯರ ಮತ್ತು ನವಜಾತ ಶಿಶುವಿಗೆ ಮಾಡಿಸಬೇಕಾದ ತಪಾಸಣೆಗಳನ್ನು ನಿರ್ಲ್ಯಕ್ಷಿಸುವಂತಿಲ್ಲ. ಶಿಶು ಮರಣ ಹಾಗೂ ತಾಯಿ ಮರಣ ತಡೆಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು ಎಂದು ಡಿಎಚ್‌ಒ ಡಾ.ವೈ ರಮೇಶಬಾಬು ಹೇಳಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶಿಶು ಹಾಗೂ ತಾಯಿ ಮರಣ ಕುರಿತ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಮನೆ ಭೇಟಿಯ ಮೂಲಕ ಕುಟುಂಬದ ಸದಸ್ಯರಿಗೆ ಅವರ ವೈಯಕ್ತಿಕ ಕೆಲಸಗಳ ಕಾರಣದಿಂದ ತಪಾಸಣೆಗೆ ವಿಳಂಬ ಮಾಡದಂತೆ ಮನವೊಲಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು. ಗಂಡಾಂತರ ಗರ್ಭಿಣಿಯರು ಎಂದು ಗುರುತಿಸಿದ ನಂತರ ನಿರಂತರ ನಿಗಾವಣೆ ಕೈಗೊಳ್ಳಬೇಕು. ರಕ್ತದೊತ್ತಡ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಶೀಲಿಸಿ ಅಗತ್ಯವೆನಿಸಿದಲ್ಲಿ ತಜ್ಞ ವೈದ್ಯರ ಬಳಿ ತಕ್ಷಣವೇ ಕಳುಹಿಸಬೇಕು ಎಂದು ತಿಳಿಸಿದರು. ಮೊದಲ ಹೆರಿಗೆ ಶಸ್ತಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಕುರಿತು ಸಮುದಾಯದಲ್ಲಿ ಆರೋಗ್ಯ ಶಿಕ್ಷಣ ನೀಡಬೇಕು. ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸ್ಸು ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಂದರ್ಭದಲ್ಲಿ ತಕ್ಷಣವೇ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದರು.
ವಿಮ್ಸ್ ಪ್ರಸೂತಿ ವಿಭಾಗದ ಮುಖಸ್ಥೆ ಡಾ.ಆಶಾರಾಣಿ ಮಾತನಾಡಿ, ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಗಂಡಾಂತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿವಾರ ಚರ್ಚಿಸಲು ಆದ್ಯತೆಯಾಗಬೇಕು ಎಂದು ಸಲಹೆ ನೀಡಿದರು.