ಸಕಲೇಶಪುರ: ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಾಂಸಕ್ಕಾಗಿ ಗರ್ಭಿಣಿ ಎಮ್ಮೆಯನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.
ಕ್ಯಾಮನಹಳ್ಳಿ ಗ್ರಾಮದ ದಯಾನಿಧಿ ಎಂಬುವವರಿಗೆ ಸೇರಿದ 8 ತಿಂಗಳ ಗರ್ಭಿಣಿ ಎಮ್ಮೆಯನ್ನು ಕಾಫಿ ತೋಟದಲ್ಲಿ ಮೇಯುತ್ತಿದ್ದ ವೇಳೆ ಮಂಗಳವಾರ ಸಂಜೆ ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಗ್ರಾಮದ ಹೊರವಲಯದ ಕಾಫಿ ತೋಟದಲ್ಲಿ ಗುಂಡಿನ ಸದ್ದು ಕೇಳಿದ ದಯಾನಿಧಿ ಎಂಬುವವರು ನೋಡಿದಾಗ ಎಮ್ಮೆಯನ್ನು ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ವಾಪಸ್ ಸ್ಥಳಕ್ಕೆ ತೆರಳುಷ್ಟರಲ್ಲಿ ಎಮ್ಮೆಯನ್ನು ಅನತಿ ದೂರಕ್ಕೆ ಸಾಗಿಸಿ ಚರ್ಮ, ಮಾಂಸ ಬೇರ್ಪಡಿಸಲು ಮುಂದಾಗಿದ್ದರು. ಈ ವೇಳೆ ಗ್ರಾಮಸ್ಥರನ್ನು ಕಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಷಯ ತಿಳಿದು ಹಿಂದ ುಪರಸಂಘಟನೆಗಳ ಮುಖಂಡರು ಸ್ಥಳಕ್ಕೆ ತೆರಳಿ ಆಕ್ರೋಶ ವ್ಯಕ್ತಪಡಿಸಿ, ಗ್ರಾಮಸ್ಥರೊಂದಿಗೆ ಸೇರಿ ಎಮ್ಮೆಯ ಮೃತದೇಹದೊಂದಿಗೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ತಡರಾತ್ರಿ ಗ್ರಾಮಕ್ಕೆ ತೆರಳಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್, ಹಿಂದುಪರ ಸಂಘಟನೆ ಮುಖಂಡರು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿ, ಮೃತ ಎಮ್ಮೆಯನ್ನು ಪಟ್ಟಣದ ಪಶು ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
ಬುಧವಾರ ಅದೇ ಗ್ರಾಮದ ಮಹಮ್ಮದ್ ಹಾಗೂ ಅಬ್ದುಲ್ ಖಾದ್ರಿ ಎಂಬುವರನ್ನು ಬಂಧಿಸಿ, ಪರವಾನಗಿ ಇಲ್ಲದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಗಳು ಎನ್ನಲಾದ ತಾಲೂಕಿನ ದೇಖ್ಲಾ ಗ್ರಾಮದ ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.
ಮೋಸಕ್ಕೆ ಯತ್ನ
ಪಶ್ಚಿಮಘಟ್ಟಕ್ಕೆ ಸನಿಹವಿರುವ ದೇಖ್ಲಾ ಗ್ರಾಮದಲ್ಲಿ ಕಾಡುಪ್ರಾಣಿಗಳ ಬೇಟೆ ನಿರಂತರವಾಗಿ ನಡೆಯುತ್ತಿದ್ದು ಗ್ರಾಮದ ಹಲವು ಆರೋಪಿಗಳನ್ನು ಕಾಡುಪ್ರಾಣಿಗಳ ಮಾಂಸದೊಂದಿಗೆ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬೇಟೆಯಾಡುವ ಪ್ರಾಣಿಗಳ ಮಾಂಸವನ್ನು ಕೇರಳಕ್ಕೆ ಸಾಗಿಸಿ ಮಾರಾಟ ಮಾಡುವ ಜಾಲವಿದೆ. ಅಲ್ಲದೇ ಕಾಡೆಮ್ಮೆ ಮಾಂಸಕ್ಕೆ ಬಾರಿ ಬೇಡಿಕೆ ಇದೆ ಎನ್ನಲಾಗಿದೆ. ಗುರುವಾರ ಬಕ್ರೀದ್ ಹಬ್ಬ ಇರುವ ಹಿನ್ನೆಲೆಯಲ್ಲಿ ಕಾಡೆಮ್ಮೆ ಮಾಂಸ ಎಂದು ನಂಬಿಸಿ ಸಾಕೆಮ್ಮೆ ಮಾಂಸ ಮಾರಾಟಕ್ಕೆ ದುಷ್ಕರ್ಮಿಗಳು ಉದ್ದೇಶಿಸಿದ್ದರು ಎನ್ನಲಾಗಿದೆ.