ಜಿಲ್ಲೆ

ಗರ್ಭಿಣಿ ಎಮ್ಮೆ ಗುಂಡಿಕ್ಕಿ ಕೊಲೆ; ವಿಎಚ್‌ಪಿ, ಬಜರಂಗದಳ ಖಂಡನೆ

ಹಾಸನ : ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿ ಕ್ಯಾಮನ ಹಳ್ಳಿಯಲ್ಲಿ ಇತ್ತೀಚೆಗೆ 8 ತಿಂಗಳ ಗರ್ಭಿಣಿ ಎಮ್ಮೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಖಂಡಿಸುತ್ತದೆ ಎಂದು ವಿಭಾಗೀಯ ಕಾರ್ಯದರ್ಶಿ ಮಹೀಪಾಲ್ ಹೇಳಿದರು.

ಎಮ್ಮೆ ಕೊಂದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿರುವುದು ಶ್ಲಾಘನೀಯ, ಆದರೆ ಮಲೆನಾಡು ಭಾಗದಲ್ಲಿ ಅಕ್ರಮ ಬಂದೂಕುಗಳ ಬಳಕೆ ಹೆಚ್ಚಾಗಿದೆ. ಅವುಗಳ ಬಗ್ಗೆ ತನಿಖೆ ನಡೆಸಿ ಅಕ್ರಮವಾಗಿ ಬಂದೂಕುಗಳನ್ನು ಸಂಗ್ರಹ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಉಗ್ರಗಾಮಿ ಚಟುವಟಿಕೆಗಳು ಕೂಡ ಹೆಚ್ಚಾಗುತ್ತಿವೆ. ಕೂಡಲೇ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಘಟನೆ ಖಂಡಿಸಿ ಸಕಲೇಶಪುರದಲ್ಲಿ ನಡೆದ ಪ್ರತಿಭಟನೆ ವೇಳೆ, ವಿಶ್ವ ಹಿಂದೂ ಪರಿಷತ್‌ನ ರಘು ಸಕಲೇಶಪುರ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಘು ಅವರನ್ನು ಬಂಧಿಸಲು ಪೊಲೀಸರು ರಾತ್ರೋರಾತ್ರಿ ರಘು ಅವರ ಮನೆಗೆ ನುಗ್ಗಿ ವಯಸ್ಕ ದಂಪತಿ ಇರುವ ವೇಳೆ ಅವರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಯಾವುದೇ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಇಲ್ಲದೆ ಮನೆಗೆ ನುಗ್ಗಿರುವ ಪೊಲೀಸರ ನಡೆ ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳಾದ ಅನೂಪ್, ಅಭಿಷೇಕ, ಮನು, ವಿಕಾಸ್ ಇತರರು ಇದ್ದರು.