ಜಿಲ್ಲೆ

ಗರ್ಭಕೊರಳ ಕ್ಯಾನ್ಸರ್ ಜಾಗೃತಿ ಜಾಥಾಗೆ ಡಿಸಿ ಚಾಲನೆ

ಹಾಸನ: ಗರ್ಭಕೊರಳ ಕ್ಯಾನ್ಸರ್ ತಡೆಗೆ ಮಹಿಳೆಯರು ನಿಯಮಿತವಾಗಿ ಪರೀಕ್ಷೆಗೊಳಗಾಗಿ, ಹೆಚ್‌ವಿಪಿ ಲಸಿಕೆ ಪಡೆಯುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗರ್ಭಕೊರಳ ಕ್ಯಾನ್ಸರ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಗರ್ಭಕೊರಳ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಕ್ಯಾನ್ಸರ್ ಆಗಿದ್ದು, ಭಾರತದಲ್ಲಿ ಇದರಿಂದ ಪ್ರತಿ 7 ನಿಮಿಷಕ್ಕೆ ಒಬ್ಬ ಮಹಿಳೆಯಂತೆ ಸಾವನ್ನಪ್ಪುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚುವ ಪ್ಯಾಪ್‌ಸ್ಮಿಯರ್ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಎದುರಾಗಬಹುದಾರ ಅಪಾಯದಿಂದ ಪಾರಾಗಬಹುದು ಎಂದು ತಿಳಿಸಿದರು.
ವೈದ್ಯೆ ಡಾ.ಸೌಮ್ಯಮಣಿ ಅವರು ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ 1.23 ಲಕ್ಷಕ್ಕೂ ಹೆಚ್ಚು ಗರ್ಭಕೊರಳ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 77 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರತಿ 7 ನಿಮಿಷಕ್ಕೆ ಒಬ್ಬರಂತೆ, ಪ್ರತಿ ದಿನ 200 ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಲಸಿಕೆ, ಔಷಧ ಪಡೆದುಕೊಳ್ಳುವುದರಿಂದ ಖಂಡಿತವಾಗಿ ತಡೆಗಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಜಾಥಾದಲ್ಲಿ ನೂರಾರು ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹೆಚ್‌ವಿಪಿ ಲಸಿಕೆ ಮಹತ್ವ ಹಾಗು ಗರ್ಭಕೊರಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಾಮಫಲಕ ಹಿಡಿದು ನಗರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಹಿಮ್ಸ್ ನಿರ್ದೇಶಕ ಡಾ.ಎಸ್.ವಿ. ಸಂತೋಷ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಲೋಕೇಶ್, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ದಿನೇಶ್, ಡಾ.ಭಾರತಿ ರಾಜಶೇಖರ್, ಡಾ.ಪಾಲಾಕ್ಷ ಮತ್ತಿತರರು ಹಾಜರಿದ್ದರು.