ತಿಪಟೂರು: ನಗರಕ್ಕೆ ನೊಣವಿನಕೆರೆ ಕೆರೆಯಿಂದ ನೀರು ಪೂರೈಸುವ ಯೋಜನೆ ಮಾರ್ಪಾಡಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿವರಣೆ ಕೇಳಿದೆ.
ಅಂದಿನ ಶಾಸಕ ಕೆ.ಷಡಕ್ಷರಿ ಅವರ ಸತತ ಪ್ರಯತ್ನದಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ನಗರಕ್ಕೆ ಪೈಪ್‌ಲೈನ್ ಮೂಲಕ ನೊಣವಿನಕೆರೆ ಕೆರೆಯಿಂದ ಕುಡಿಯುವ ನೀರೊದಗಿಸಲು 127 ಕೋಟಿ ರೂಪಾಯಿ ಮೊತ್ತದ 24್ಡ7 ಯೋಜನೆಗೆ ಮಂಜೂರಾತಿ ಪಡೆಯಲಾಗಿತ್ತು. ಮುಂದಿನ ದಿನಗಳಲ್ಲಿ ಆ ಭಾಗದ ರೈತರಿಗೆ ಅನ್ಯಾಯವಾಗಬಾರದೆಂದು 2014ರಲ್ಲಿ ನೊಣವಿನಕೆರೆಯನ್ನು ಅಚ್ಚುಕಟ್ಟು ಪ್ರದೇಶಕ್ಕೆ ಸೇರಿಸುವ ಪ್ರಯತ್ನದಲ್ಲಿ ಯಶಸ್ವಿಯಾದ ಕೆ.ಷಡಕ್ಷರಿ, ಭತ್ತ ಬೆಳೆಯುವ ರೈತರು ವಿರೋಧಿಸಬಾರದೆಂಬ ಕಾರಣಕ್ಕೆ ಹೆಚ್ಚುವರಿಯಾಗಿ 0.3 ಟಿಎಂಸಿ ನೀರನ್ನು ಕಾವೇರಿ ನಿಗಮದಿಂದ ಅಧಿಕೃತವಾಗಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಕಾಮಗಾರಿ ಭೂಮಿ ಪೂಜೆ ವೇಳೆ ನಡೆದ ಸಣ್ಣ ಘಟನೆ ದೊಡ್ಡದಾಗಿ, ಆ ಭಾಗದ ರೈತರು ಯೋಜನೆಗೆ ಅಡ್ಡಿಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಯೋಜನೆ ಸ್ಥಗಿತಗೊಂಡು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು.
ನೊಣವಿನಕೆರೆಯಿಂದ ತಿಪಟೂರಿಗೆ ನೀರು ತರುವ ಯೋಜನೆಯನ್ನು ಮೊದಲು ಒಪ್ಪಿದ್ದ ಶಾಸಕ ಬಿ.ಸಿ.ನಾಗೇಶ್, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ನಂತರ ನಗರಸಭೆಯಲ್ಲಿ ವಿಷಯ ಮಂಡಿಸಿ ಅಂದಿನ ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಕಾಶ್ ಸೇರಿ 11 ಸದಸ್ಯರ ವಿರೋಧದ ನಡುವೆಯೂ ನಗರ ಸಮೀಪದ ಈಚನೂರು ಕೆರೆಯಿಂದ 24್ಡ7ಗೆ ನೀರು ತರಲು ಯೋಜನೆಯಲ್ಲಿ ಮಾರ್ಪಾಟು ಮಾಡಿಸಿದ್ದರು.
ಪ್ರಸ್ತುತ, 72 ಎಂಸಿಎಫ್‌ಟಿ ನೀರಿನ ಸಾಮರ್ಥ್ಯದ ಈಚನೂರು ಕೆರೆಯಿಂದ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಿಲ್ಲ ಎಂಬ ಸಮಸ್ಯೆಗೆ ಪರಿಹಾರವಾಗಿ ಈಚನೂರು ಕೆರೆಯ ವೈಜ್ಞಾನಿಕ ಸಮೀಕ್ಷೆ ನಡೆಸಿ, ಕೆರೆಯ ಅರ್ಧ ಭಾಗದಲ್ಲಿ 5 ಅಡಿ ಹೂಳು ತೆಗೆಸಿದರೆ ನೀರಿನ ಸಾಮರ್ಥ್ಯ 100 ಎಂಸಿಎಫ್‌ಟಿಗೆ ಹೆಚ್ಚುತ್ತದೆ ಎಂಬ ಅಂದಾಜಿನಲ್ಲಿ ಹೊಸ ಯೋಜನೆ ತಯಾರಿಸಲಾಗಿದೆ.
26 ಕೋಟಿ ರೂಪಾಯಿ ವೆಚ್ಚದ ಹೂಳೆತ್ತುವ ಕಾಮಗಾರಿಗೆ ಜೂ.4ರಂದು ಚಾಲನೆ ನೀಡಲಾಗಿದೆ. ಇಷ್ಟೆಲ್ಲ ಏಳು-ಬೀಳುಗಳ ನಡುವೆ 2015ರಲ್ಲೇ ಪ್ರಾರಂಭವಾಗಬೇಕಿದ್ದ 24್ಡ7 ಕುಡಿಯುವ ನೀರಿನ ಯೋಜನೆ ಇನ್ನೂ ತಾರ್ತಿಕ ಅಂತ್ಯ ಕಂಡಿಲ್ಲ. ಈಗಲೂ ನಗರದ ಕೆಲವೆಡೆ 15-20 ದಿನಗಳಿಗೊಮ್ಮೆ ಹೇಮಾವತಿ ನೀರು ಬಿಡಲಾಗುತ್ತಿದೆ.
ವಿಪರ್ಯಾಸವೆಂದರೆ, ನಗರಸಭೆಯ ನಿರ್ಣಯ ಮತ್ತು ಶಾಸಕರ ಮನವಿ ಮೇರೆಗೆ ಯೋಜನೆ ಮಾರ್ಪಾಟು ಮಾಡಿದರೆ ಸಾಲದು, ಇದಕ್ಕೆ ಸೂಕ್ತ ವೈಜ್ಞಾನಿಕ ಕಾರಣಗಳೇನು?, ಸರ್ಕಾರದ ನಡವಳಿಕೆಗಳೇನು? ಎಂಬುದರ ಸಂಪೂರ್ಣ ವಿವರ ನೀಡುವಂತೆ ಜೂ.11ರಂದು ರಾಜ್ಯ ಉಚ್ಛ ನ್ಯಾಯಾಲಯ, ರಾಜ್ಯ ಸರ್ಕಾರಕ್ಕೆ ಆದೇಶಿಸಿರುವುದರಿಂದ ನೊಣವಿನಕೆರೆಯಿಂದ ನೀರು ತರುವ ಯೋಜನೆ ಮತ್ತೆ ಗರಿಗೆದರಿದೆ. ನೀರು ಕೊಡಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ನೊಣವಿನಕೆರೆ ಭಾಗದ ರೈತರು ತಕರಾರು ಅರ್ಜಿ ವಾಪಸ್ ಪಡೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮತ್ತು ಈಚನೂರು ಕೆರೆಯಿಂದ ಮೂರು ಹಂತದಲ್ಲಿ ನೀರು ತುಂಬಿಸುವ ಬದಲು, ಒಂದೇ ಹಂತದಲ್ಲಿ ಲಿಫ್ಟ್ ಆಗುವ ನೊಣವಿನಕೆರೆ ಕೆರೆಯ ಯೋಜನೆ ಬಗ್ಗೆ ಹೈಕೋರ್ಟ್ ಕೈಗೊಳ್ಳುವ ನಿಲುವಿನ ಮೇಲೆ 24್ಡ7 ಯೋಜನೆ ಅವಲಂಬಿತವಾಗಿದೆ.
ಕಾಮಗಾರಿ ಉದ್ಘಾಟನಾ ಪೂಜೆಗೆ ಕರೆದಿದ್ದರು, ಹೋಗಿದ್ದೆ, ಯೋಜನೆಯ ವಿವರ ಇನ್ನೂ ಕೊಟ್ಟಿಲ್ಲ. ಕೆಯುಡಬ್ಲ್ಯುಡಿಎಸ್‌ನಿಂದ ಯೋಜನೆಯ ಮಾಹಿತಿ ಬಂದ ನಂತರ ತಿಳಿಯುತ್ತದೆ. ಪಿ.ಜೆ. ರಾಮಮೋಹನ್, ನಗರಸಭೆ ಅಧ್ಯಕ್ಷ ಅಗಾಧ ಪ್ರಮಾಣದ ಯಂತ್ರಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ನಾಲೆಯಲ್ಲಿ ನೀರು ಹರಿಯುವ ಮುಂಚೆ ಕಾಮಗಾರಿ ಮುಗಿಯಲಿದೆ. ಅಷ್ಟರೊಳಗೆ ನಾಲೆಯಲ್ಲಿ ನೀರು ಹರಿದರೆ ಅದನ್ನು ಕೆರೆಗೆ ತುಂಬಿಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಯಾವುದೇ ಕಾರಣಕ್ಕೂ ನಮ್ಮ ಪಾಲಿನ ನೀರು ವ್ಯರ್ಥವಾಗಲು ಬಿಡಲ್ಲ. ಬಿ.ಸಿ.ನಾಗೇಶ್ ಶಾಸಕ