ಮದ್ದೂರು; ಸ್ಮಶಾನಕ್ಕೆ ಮೀಸಲಿರಿಸಿರುವ ನಿವೇಶನವನ್ನು ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿರುವ ಗೊರವನಹಳ್ಳಿ ಗ್ರಾ.ಪಂ. ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ ಪಿಡಿಒ ಪೂರ್ಣಿಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಗೊರವನಹಳ್ಳಿ ಗ್ರಾ.ಪಂ. ಕಚೇರಿ ಬಳಿ ಗುರುವಾರ ಜಮಾಯಿಸಿದ ಸ್ಥಳೀಯರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸದರಿ ಯೋಜನೆಯನ್ನು ಕೈಬಿಟ್ಟು ಸ್ಮಶಾನ ಜಾಗವನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಗೊರವನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸರ್ವೇ ನಂ. 159 ರಲ್ಲಿ 1.15 ಗುಂಟೆ ಸರ್ಕಾರಿ ಜಮೀನನ್ನು 20 ವರ್ಷಗಳ ಹಿಂದೆ ಸ್ಮಶಾನ ಜಾಗಕ್ಕೆ ಮೀಸಲಿಟ್ಟಿದ್ದರೂ ಕೆಲ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿರುವ ಕ್ರಮ ಸರಿಯಲ್ಲವೆಂದರು.
ಗ್ರಾಮದಲ್ಲಿ ಸುಮಾರು 200 ಕುಟುಂಬಗಳು ಹಾಗೂ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಮತ್ತು ಎಲ್ಲ ಸಮುದಾಯದವರು ವಾಸಿಸುತ್ತಿರುವ ಗ್ರಾಮದಲ್ಲಿ ಕೆಲ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸ್ಮಶಾನ ನಿವೇಶನದ ಆರ್‌ಟಿಸಿಯನ್ನು ತಿದ್ದುಪಡಿ ಮಾಡಿ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಸ್ಮಶಾನ ಇಲ್ಲದಂತಾಗಿದ್ದು ಕೂಡಲೇ ಯೋಜನೆಯನ್ನು ಕೈಬಿಟ್ಟು ಸ್ಮಶಾನಕ್ಕೆ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.
ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿರಿಸಿರುವ ಜಾಗದಲ್ಲಿ ಬುಧವಾರ ಸ್ಥಳೀಯ ಶಾಸಕ ಕೆ.ಎಂ.ಉದಯ್ ಅವರು 1.80 ಕೋಟಿ ರೂ. ವೆಚ್ಚದ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.
ಆರ್ಥಿಕವಾಗಿ ಹಿಂದುಳಿದವರು, ಕೂಲಿ ಕಾರ್ಮಿಕರು, ಬಡವರು ಗ್ರಾಮದಲ್ಲಿ ವಾಸಿಸುತ್ತಿದ್ದು ಕುಟುಂಬದಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸಲು ಸ್ವಂತ ನಿವೇಶನ ಇಲ್ಲದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸ್ಮಶಾನ ನಿವೇಶನದಲ್ಲಿ ಘಟಕ ನಿರ್ಮಾಣ ಮಾಡಿದರೆ ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಕೂಡಲೇ ಒಂದು ವಾರದೊಳಗಾಗಿ ಘನತ್ಯಾಜ್ಯ ಘಟಕ ನಿರ್ಮಾಣ ಕಾಮಗಾರಿಯ ಆದೇಶವನ್ನು ಗ್ರಾ.ಪಂ. ಹಾಗೂ ಜಿಲ್ಲಾ ಮತ್ತು ತಾಲೂಕು ಆಡಳಿತ ವಾಪಸ್ ಪಡೆಯದಿದ್ದಲ್ಲಿ ಸ್ಥಳೀಯ ನಿವಾಸಿಗಳು ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳೀಯ ಮುಖಂಡರಾದ ಪುನೀತ್, ಎ.ಆರ್.ರಾಜು, ಚನ್ನಪ್ಪ, ಪ್ರಶಾಂತ್, ನಾಗು, ಕೃಷ್ಣ, ಮಧು, ಪಾಪಣ್ಣ, ಮಂಗಳಮ್ಮ, ಕವಿತ, ಚಿಕ್ಕಸಿದ್ದಯ್ಯ, ಯೋಗೇಶ್, ಲೋಕೇಶ್, ಸಿದ್ದರಾಮು, ಕೃಷ್ಣ, ಶಂಕರ್, ನಿಂಗೇಗೌಡ ನೃತೃತ್ವ ವಹಿಸಿದ್ದರು.