ಜಮಖಂಡಿ: ತತ್ವಜ್ಞಾನಿ ಗುರುದೇವ ರಾನಡೆ ಶ್ರೇಷ್ಠ ಬರಹಗಾರರಾಗಿದ್ದರು. ಅವರಲ್ಲಿದ್ದ ಅಪಾರ ತತ್ವಜ್ಞಾನದಿಂದ ದೇಶ ವಿದೇಶಗಳಲ್ಲಿ ಅಜರಾಮರಾಗಿದ್ದಾರೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪಿ.ಬಿ. ಪ್ರೌಢಶಾಲೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಗುರುದೇವ ರಾನಡೆ ಸಾಂಸ್ಕೃತಿಕ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಗುರುದೇವ ರಾನಡೆ ಅವರ ಜನ್ಮ ದಿನದಂದೇ ನಗರದಲ್ಲಿ ಶ್ರೀ ಗುರುದೇವ ರಾನಡೆ ಸಾಂಸ್ಕೃತಿಕ ಭವನ ಉದ್ಘಾಟನೆಯಾಗುತ್ತಿರುವುದು ಶ್ಲಾಘನೀಯ. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರ ಪ್ರಯತ್ನದ ಲವಾಗಿ ಭವ್ಯ ಭವನವು 1.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದರು.
ಜಾತ್ಯತೀತ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಭವನದ ಅವಶ್ಯಕತೆ ಇತ್ತು. ಎಸ್‌ಡಿಎಂಸಿ ಹಾಗೂ ಶಿಕ್ಷಣ ಇಲಾಖೆಯು ಈ ಭವನವನ್ನು ಸರಿಯಾಗಿ ನಿರ್ವಹಿಸುವ ಜತೆಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಬಹು ವರ್ಷಗಳಿಂದ ಭವನದ ಬೇಡಿಕೆ ಇತ್ತು. ಗುರುದೇವ ರಾನಡೆ ಅವರ ಹೆಸರಿನಲ್ಲಿ ಈ ಭವನ ನಿರ್ಮಾಣದ ಭೂಮಿಪೂಜೆಯನ್ನು ಪೂಜ್ಯ ಸಿದ್ಧೇಶ್ವರ ಶ್ರೀಗಳು ನೆರವೇರಿಸಿದ್ದರು. ಸಿದ್ಧೇಶ್ವರ ಶ್ರೀಗಳು ಗುರುದೇವ ರಾನಡೆ ಅವರ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದರು. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಇದ್ದಾಗ ರಾನಡೆ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರು ಎಂದರು.
ಬೆಳಗಾವಿ ತತ್ವಶಾಸ್ತ್ರಜ್ಞ ಡಾ.ವೀರೇಶ್ವರ ಸ್ವಾಮೀಜಿ ಮಾತನಾಡಿ, ಗುರುದೇವ ರಾನಡೆ ತಮ್ಮ ಶಿಕ್ಷಣವನ್ನು ಜಮಖಂಡಿಯಲ್ಲಿ ಮುಗಿಸಿ, ಪದವಿಯನ್ನು ಮಹಾರಾಷ್ಟ್ರದಲ್ಲಿ ಪೂರೈಸಿದರು. ತತ್ವಶಾಸ್ತ್ರದಲ್ಲಿ ಪಂಡಿತರಾಗಿದ್ದರು. 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಈಗ ಅವರ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಎಲ್ಲ ಗ್ರಂಥಗಳನ್ನು ಕನ್ನಡ, ಹಿಂದಿ, ಮರಾಠಿ ಇಂಗ್ಲಿಷ್‌ನಲ್ಲಿ ಬರೆದು, ಇಡೀ ಜಗತ್ತಿಗೆ ತತ್ವಜ್ಞಾನದ ಮೂಲಕ ಭಾರತ ಪರಿಚಯಿಸಿದ್ದಾರೆ ಎಂದು ಹೇಳಿದರು.
ವಿಶ್ರಾಂತ ಪ್ರಾಂಶುಪಾಲ ಜಿ.ಆರ್. ಕುಲಕರ್ಣಿ ಮಾತನಾಡಿ, ಅಧ್ಯಾತ್ಮದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಇಂದಿನ ಮಕ್ಕಳು ಗುರುದೇವ ರಾನಡೆ ಅವರ ಜೀವನ ಚರಿತ್ರೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಓಲೇಮಠದ ಡಾ.ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಚಿತ್ರಕಲಾ ಶಿಕ್ಷಕ ಹಲಗಲಿ ಅವರು ಗುರುದೇವ ರಾನಡೆ ಚಿತ್ರ ಬಿಡಿಸಿದಕ್ಕೆ ಅವರನ್ನು ಸನ್ಮಾನಿಸಲಾಯಿತು.
ಹಿಪ್ಪರಗಿಯ ಪ್ರಭುಜೀ ಮಹಾರಾಜರು, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ತಹಸೀಲ್ದಾರ್ ಸದಾಶಿವ ಮಕ್ಕೊಜಿ, ಉಪ ಪ್ರಾಚಾರ್ಯ ಎನ್.ಎಂ. ಚೌರ, ಎಇಇ ವಿಜಯ ಹಿರೇಮಠ ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸನ್ನವರ ಸ್ವಾಗತಿಸಿದರು. ಬಿಆರ್‌ಸಿ ರಮೇಶ ಅವಟಿ ನಿರೂಪಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸರ್ವೋತ್ತಮ ಗಲಗಲಿ ವಂದಿಸಿದರು.