ಜಿಲ್ಲೆ

ಗಮನಸೆಳೆದ ತ್ಯಾಜ್ಯ ವಸ್ತುಗಳ ಕಲಾಕೃತಿ: ಮರುಬಳಕೆ ಕುರಿತು ಸಾರ್ವಜನಿಕರಿಗೆ ಜಾಗೃತಿ

ಪಾಂಡವಪುರ: ಸ್ವಚ್ಛತೆಯೇ ಸೇವೆ ಎಂಬ ಅಭಿಯಾನದಡಿ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ಯಾಜ್ಯ ವಸ್ತುಗಳಿಂದ ಕಲಾಕೃತಿ ಸಿದ್ಧಪಡಿಸಿ ಪ್ರದರ್ಶನ ಕಾರ್ಯಕ್ರಮ ಗಮನ ಸೆಳೆಯಿತು.

ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು. ನೀರಿನ ಬಾಟಲಿ, ಪ್ಲಾಸ್ಟಿಕ್ ಸ್ಪೂನ್ ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನು ಸಿದ್ದಪಡಿಸಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ತ್ಯಾಜ್ಯವನ್ನು ಮರುಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇದಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಅವರು, ಸ್ವಚ್ಛತೆಯೇ ಸೇವೆ ಎಂಬ ಅಭಿಯಾನದಡಿ ಜಿಲ್ಲೆಯ ಎಲ್ಲ ಗ್ರಾಪಂನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಸ್ವಚ್ಛತೆ ಎಂಬುದು ಕೇವಲ ಗ್ರಾಪಂ ಜವಾಬ್ದಾರಿಯಷ್ಟೇ ಅಲ್ಲ. ಸಾರ್ವಜನಿಕರು ಕೂಡ ಪರಿಸರ ಸ್ವಚ್ಛವಾಗಿಸಲು ಸಹಕರಿಸಬೇಕು. ಅಭಿಯಾನದಡಿ ಗ್ರಾಪಂಗಳು ವಿನೂತನ ಚಟುವಟಿಕೆ ಹಮ್ಮಿಕೊಂಡು ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

15,000ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಸಾರ್ವಜನಿಕರು ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಹಕಾರದಿಂದ ಮಾಡಲಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ, ಮರುಬಳಕೆ ಮಾಡುವುದು ಅಥವಾ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದನ್ನು ಸಾರ್ವಜನಿಕರು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರು ನಮ್ಮ ಗ್ರಾಮ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದಡಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸಿದಲ್ಲಿ ಆ ಗ್ರಾಮ, ಗ್ರಾಪಂ, ತಾಲೂಕು, ಜಿಲ್ಲೆ ಸ್ವಚ್ಛವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಗ್ರಾಮಗಳಲ್ಲಿ ತ್ಯಾಜ್ಯ ಸುರಿಯುವ ಸ್ಥಳ ಗುರುತಿಸಿ ಅವುಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ತೆರವುಗೊಳಿಸಬೇಕು. ಈ ಮೂಲಕ ಗ್ರಾಮವನ್ನು ಸ್ವಚ್ಛ ಸುಂದರ ಗ್ರಾಮವನ್ನಾಗಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಬಳಸಿದ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವುದು ಹಾಗೂ ಹೊಸ ವಸ್ತುಗಳ ಉತ್ಪಾದನೆಯಲ್ಲಿ ಬಳಸುವುದು. ಆ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಅಭಿಯಾನದ ಅಂಗವಾಗಿ ಮಂಡ್ಯದಲ್ಲಿ ಸೈಕ್ಲೋಥಾನ್, ಮದ್ದೂರಿನಲ್ಲಿ ಸ್ವಚ್ಛತೆಗಾಗಿ ನಡಿಗೆ ಎಂಬ ಘೋಷವಾಕ್ಯದಡಿ ವಾಕಥಾನ್, ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಜಲ ಕ್ರೀಡೆಗಳ ಸ್ಥಳಗಳಲ್ಲಿ ಜಾಗೃತಿ, ಕೆ.ಆರ್.ಪೇಟೆಯಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಆರೋಗ್ಯ ಉಚಿತ ತಪಾಸಣೆ, ನಾಗಮಂಗಲದಲ್ಲಿ ರಂಗೋಲಿ ಬಿಡಿಸುವ ಮತ್ತು ಚಿತ್ರ ಬರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು ಎಂದರು.

ತಾಲೂಕು ಪಂಚಾಯಿತಿ ಇಒ ವೀಣಾ, ಸಹಾಯಕ ನಿರ್ದೇಶಕ ರಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಇತರರಿದ್ದರು.