ಚಿತ್ರದುರ್ಗ: ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವಿನ ಲೋಕವೇ ಅಲ್ಲಿ ಅನಾವರಣಗೊಂಡಿತ್ತು. ಕೋಟೆನಾಡಿಗೆ ರಾಜರ್ಷಿಗಳ ಕೊಡುಗೆ ಶೀರ್ಷಿಕೆಯಡಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕರ್ನಾಟಕದ ಏಳ್ಗೆಗಾಗಿ ಜಾರಿಗೊಳಿಸಿದ ಯೋಜನೆಗಳ ಮಾಹಿತಿಯೂ ಗಮನ ಸೆಳೆಯಿತು. ಅವುಗಳ ಮಧ್ಯೆ ಒಡೆಯರ್ ವಿಗ್ರಹ ಕಂಗೊಳಿಸಿತು…
ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಮುರುಘಾಮಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ಮೇಳ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಜೋಡೆತ್ತುಗಳ ಪ್ರದರ್ಶನದಲ್ಲಿ ಕಂಡ ದೃಶ್ಯವಿದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ, ಬೆಳೆಗಳ ಸಂಬಂಧ ಕೀಟ ಮತ್ತು ರೋಗ ನಿರ್ವಹಣೆ, ತೋಟಗಾರಿಕೆ ವಿಸ್ತರಣೆ ಸೇರಿ ಹಲವು ಯೋಜನೆಗಳ ಕುರಿತ ಉಪಯುಕ್ತ ಮಾಹಿತಿಯನ್ನು ವಿವರಿಸಲಾಗಿತ್ತು. ಪಾಲಿ ಹೌಸ್ ಕೂಡ ಹಲವರ ಗಮನ ಸೆಳೆಯುವಲ್ಲಿ ಸಫಲವಾಯಿತು.
ಹೊಲ, ಸಾಲು, ಗೋಮಾಳ, ತೋಡು ಬಾವಿಯ ಮರುಪೂರಣ, ಕೃಷಿ ಹೊಂಡ, ಚೌಕು ಮಡಿ, ಹೂಳು ಬೋನು, ಡೀಸೆಲ್ ಪಂಪ್ ಸೆಟ್, ಚೆಕ್ ಡ್ಯಾಮ್, ತಿರುವು ಗಾಲುವೆ, ಕುರಿ ಸಾಕಾಣಿಕೆ, ಪಶು ಸಂಗೋಪನೆ, ಎರೆಹುಳು ಗೊಬ್ಬರ, ಸಮಗ್ರ ಕೃಷಿ ಪದ್ಧತಿಯೊಂದಿಗೆ ಹಳ್ಳಿ ಜೀವನದಿಂದ ಸುಖಿ ಬದುಕು ಕಟ್ಟಿಕೊಳ್ಳುವ ಕೃಷಿ ಇಲಾಖೆಯ ಮಾದರಿಯೂ ಆಕರ್ಷಿಸಿತು.
ಭದ್ರಾ ಮೇಲ್ದಂಡೆ ಯೋಜನೆಯ ಮಾದರಿಯನ್ನು ಅನೇಕರು ಕಣ್ತುಂಬಿಕೊಂಡರು. ವಸ್ತು ಪ್ರದರ್ಶನದಲ್ಲಿ 50 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ನೂರಾರು ರೈತರು ಭೇಟಿ ನೀಡಿ ಮಾಹಿತಿ ಪಡೆಯಲು ಮುಂದಾದರು. ಕೆಲವರು ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲೂ ತೊಡಗಿದರು.
ಜೋಡೆತ್ತು ಏರಿದ ಸಿದ್ಧಲಿಂಗ ಶ್ರೀ: ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಜೋಡೆತ್ತು ಗಾಡಿ ಏರಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ನಾಗೇಂದ್ರನಾಯ್ಕ ಅವರ 5 ಲಕ್ಷ ರೂ. ಮೌಲ್ಯದ ಹಳ್ಳಿಕಾರ್, ಐಮಂಗಲದ ನವೀನ್ ಅವರ ಇದೇ ತಳಿಯ 2.25 ಲಕ್ಷ ರೂ.ನ ಜೋಡೆತ್ತು ಗಮನ ಸೆಳೆದವು. ಜಿಲ್ಲೆಯ ವಿವಿಧ ಭಾಗದ 40ಕ್ಕೂ ಹೆಚ್ಚು ಜೋಡೆತ್ತು ಭಾಗವಹಿಸಿದ್ದವು.
ತೋಟಗಾರಿಕೆ ಇಲಾಖೆ ಪ್ರಥಮ: ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಮಾದರಿ ಪ್ರಥಮ, ಕೃಷಿ ಇಲಾಖೆ-ದ್ವಿತೀಯ, ಜಲಸಂಪನ್ಮೂಲ ಇಲಾಖೆ-ಭದ್ರಾ ಮೇಲ್ದಂಡೆ ಯೋಜನೆ ತೃತೀಯ ಸ್ಥಾನ ಪಡೆದುಕೊಂಡವು.