ಗೋಣಿಕೊಪ್ಪಲು: ಹಲವು ಸಾಮಾಜಿಕ ಸೇವೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹಾಯಹಸ್ತ ನೀಡುತ್ತ ಗಮನ ಸೆಳೆದಿದ್ದ ಕೈಕೇರಿ ಭಗವತಿ ರಿಕ್ರಿಯೇಷನ್ ಹಾಗೂ ಸ್ಪೋರ್ಟ್ಸ್ ಕ್ಲಬ್ ಇದೀಗ ಬೆಳ್ಳಿ ವರ್ಷದ ಸಂಭ್ರಮದಲ್ಲಿದೆ.
ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕೊಡವ ಸಾಂಪ್ರದಾಯಿಕ ಉಮ್ಮತ್ತಾಟ್, ಕೋಲಾಟ್ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕೈಕೇರಿ ಭಗವತಿ ರಿಕ್ರಿಯೇಷನ್, ಸ್ಪೋರ್ಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಮಾತನಾಡಿ, 25 ವರ್ಷಗಳಿಂದ ಗ್ರಾಮದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮತ್ತೊಬ್ಬರಿಗೆ ಸಹಾಯಕರಾಗಿದ್ದೇವೆ. ವರ್ಷಂಪ್ರತಿ ಸ್ಥಳೀಯ ಮಟ್ಟದಲ್ಲಿರುವ ಶಾಲೆಗಳಿಗೆ, ಅಂಗನವಾಡಿಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರತಿವರ್ಷ ರಾಷ್ಟ್ರೀಯ ಹಬ್ಬಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಆಡಳಿತ ಮಂಡಳಿಯು ಎಲ್ಲ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದರು.
ಗೋಣಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಪ್ಪಂಡ ಚಿಟ್ಟಿಯಪ್ಪ, ಹಿರಿಯ ವೈದ್ಯ ಕಾಳಿಮಾಡ ಡಾ.ಶಿವಪ್ಪ, ಕಾಫಿ ಬೆಳೆಗಾರರಾದ ಕೊಕ್ಕಂಡ ಲವ ಭೀಮಯ್ಯ, ಉದ್ಯಮಿಗಳಾದ ಜಮ್ಮಡ ಗಣೇಶ್ ಅಯ್ಯಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಎಲ್ಲರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸುವ ಮೂಲಕ ಮಾದರಿಯಾಗಿರುವುದು ಶ್ಲಾಘನೀಯ. ಸಂಘ, ಸಂಸ್ಥೆಗಳು ನಿರಂತರವಾಗಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಗ್ರಾಮೀಣ ಭಾಗದಿಂದಲೇ ಸಾಮಾಜಿಕ ಸೇವಾ ಕಾರ್ಯ ಆರಂಭವಾಗಬೇಕು. ಇದರಿಂದ ಗ್ರಾಮದ ಅಭಿವೃದ್ಧಿ ಆಗಲಿದೆ ಎಂದರು.
ವೇದಿಕೆಯಲ್ಲಿ ಕೈಕೇರಿ ಭಗವತಿ ರಿಕ್ರಿಯೇಷನ್, ಸ್ಪೋರ್ಟ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಕುಪ್ಪಂಡ ಬೋಜಪ್ಪ, ಗೌ.ಕಾರ್ಯದರ್ಶಿ ಕೊಕ್ಕಂಡ ಧರ್ಮಜ, ಖಜಾಂಚಿ ಚಿಯಕ್‌ಪೂವಂಡ ಸುಬ್ರಮಣಿ, ಜಂಟಿ ಕಾರ್ಯದರ್ಶಿ ಜಮ್ಮಡ ನಾಣಯ್ಯ, ನಿರ್ದೇಶಕರಾದ ಕೊಕ್ಕಂಡ ಕರುಂಬಯ್ಯ, ಬುಟ್ಟಿಯಂಡ ಚಂಗಪ್ಪ ಉಪಸ್ಥಿತರಿದ್ದರು.
ಹಗ್ಗಜಗ್ಗಾಟ ಸೇರಿದಂತೆ ಇನ್ನಿತರ ಆಟೋಟ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಜಮ್ಮಡ ಮಾದಪ್ಪ, ಜಮ್ಮಡ ಜಾಲಿ ಬೋಪಯ್ಯ, ಬೇಲತಂಡ ಟಿಪ್ಪು, ಕುಪ್ಪಂಡ ಸಾಬು ಬೋಜಪ್ಪ, ಜಮ್ಮಡ ಗಣೇಶ್ ಅಯ್ಯಣ್ಣ, ಜಮ್ಮಡ ಜಯ ಜೋಯಪ್ಪ, ಕುಪ್ಪಂಡ ಮುತ್ತು ಭಾಗವಹಿಸಿದ್ದರು.