ಜಿಲ್ಲೆ

ಗಮನ ಸೆಳೆದ ಯಕ್ಷಗಾನ ಪ್ರದರ್ಶನ

ಮೈಸೂರು: ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಯಕ್ಷಗಾನ ಕಲೆಯ ಪ್ರದರ್ಶನದ ಸಡಗರ ಮೇಳೈಸಿತ್ತು.

ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಈ ಸಾಂಪ್ರದಾಯಿಕ ಕಲೆಯ ಪರಿಚಯವನ್ನು ಸಾಂಸ್ಕೃತಿಕ ನಗರಿ ಜನರಿಗೆ ಮಾಡಿಕೊಡಲಾಯಿತು. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನ ವೀಕ್ಷಣೆ ಸಭಿಕರಿಗೆ ವಿಶಿಷ್ಟ ಅನುಭವವನ್ನು ಉಣಬಡಿಸಿತು.

14ನೇ ವಾರ್ಷಿಕೋತ್ಸವದ ಅಂಗವಾಗಿ ಕರಾವಳಿ ಯಕ್ಷಗಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡಗುತಿಟ್ಟು ವಿದ್ಯಾರ್ಥಿಗಳಿಂದ ‘ಪೂರ್ವರಂಗ’ ಮಧ್ಯಾಹ್ನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನಕುಮಾರ್ ಹೆಗಡೆ, ಮದ್ದಳೆಯನ್ನು ಚಿನ್ನಯ ಹೆಗಡೆ, ಚಂಡೆಯನ್ನು ಮನೋಜ್ ಆಚಾರ್ ಸೊಗಸಾಗಿ ನುಡಿಸಿದರು.

ಬಳಿಕ ತೆಂಕುತಿಟ್ಟು ವಿದ್ಯಾರ್ಥಿಗಳು ಪೆರಡೂರು ರಘುರಾಮ ಮಲ್ಯ ರಚಿತ ‘ಶಶಿಪ್ರಭಾ ಪರಿಣಯ’ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸಿದರು. ಸಂಜೆ ಬಡಗುತಿಟ್ಟು ವಿದ್ಯಾರ್ಥಿಗಳು ದೇವಿದಾಸ ವಿರಚಿತ ‘ಚಿತ್ರಸೇನೆ’ ಕಾಳಗ ಪ್ರಸಂಗವನ್ನು ಪ್ರದರ್ಶಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರಾವಳಿ ಯಕ್ಷಗಾನ ಕೇಂದ್ರದ ಅಧ್ಯಕ್ಷ ಶ್ರೀಧರ ಐತಾಳ ಅವರು, ಇತಿಹಾಸವುಳ್ಳ ಯಕ್ಷಗಾನವನ್ನು ಇಂದಿನ ಪೀಳಿಗೆ ಕಲಿತು ಬೆಳೆಸುವ ಮೂಲಕ ಈ ಕಲೆಗಳನ್ನು ಉಳಿಸಬೇಕು ಎಂದರು.

ಕರಾವಳಿಯಲ್ಲಿ ಇಂದಿಗೂ ಯಕ್ಷಗಾನ ಜೀವಂತವಿದ್ದು, ಇತಿಹಾಸ ಉಳಿಸಿಕೊಂಡಿದೆ. ಜಾನಪದ ಕಲೆಯನ್ನು ಉಳಿಸುವಲ್ಲಿ ಜನರ ಸಹಕಾರವೇ ಮುಖ್ಯ ಎಂದರು. ದೀಕ್ಷಿತ್ ಆರೋಗ್ಯ ಧಾಮದ ನಿರ್ದೇಶಕ ಡಾ.ಅನಿಲ್‌ಕುಮಾರ್ ದೀಕ್ಷಿತ್, ರಾಮಕೃಷ್ಣ ನರ್ಸಿಂಗ್ ಹೋಮ್‌ನ ನಿರ್ದೇಶಕಿ ಡಾ.ಕೆ.ವಿ.ಲಕ್ಷ್ಮೀದೇವಿ, ಸಂಘಟನೆ ಕಾರ್ಯದರ್ಶಿ ಗಣೇಶ್ ಭಟ್, ಖಜಾಂಚಿ ರವಿಚಂದ್ರ ಇನ್ನಿತರರಿದ್ದರು.