ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿನ ರಾಜ್ಯಗಳ ಸಂಸ್ಕೃತಿ, ಆಚಾರ-ವಿಚಾರ, ಕ್ರೀಡೆ ಸೇರಿ ಅನೇಕ ವಿಷಯಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಇಂತಹ ವಿಚಾರಗಳನ್ನು ತಿಳಿಸುವಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಯಶಸ್ವಿಯಾಗಿದೆ. ವಿವಿಧ ರಾಜ್ಯಗಳಲ್ಲಿನ ದೇಸಿ ಕ್ರೀಡೆಗಳ (ಮಾರ್ಷಲ್ ಆರ್ಟ್ಸ್) ಪ್ರದರ್ಶನ ಮೂಲಕ ಎಲ್ಲರ ಗಮನ ಸೆಳೆದಿದೆ.
ನಗರದಲ್ಲಿ ಏರ್ಪಡಿಸಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದ 2ನೇ ದಿನವಾದ ಶುಕ್ರವಾರ ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ವಿವಿಧ ರಾಜ್ಯಗಳ ದೇಸಿ ಕ್ರೀಡೆಗಳ ಪ್ರದರ್ಶನ ಮಾಡಲಾಯಿತು.
ಸುಡು ಬಿಸಿಲಿನಲ್ಲೂ ಅತ್ಯಂತ ಶಿಸ್ತು ಬದ್ಧವಾಗಿ ತಮ್ಮ ಕ್ರೀಡೆಗಳನ್ನು ಪ್ರದರ್ಶನ ಮಾಡುವ ತಮ್ಮ ರಾಜ್ಯದ ವಿಶೇಷ ಕಲೆಗಳನ್ನು ಸ್ಥಳೀಯ ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದರು. ಕೇರಳದ ಕಲರಿಪಯಟ್ಟು, ತಮಿಳುನಾಡಿನ ಸಿಲಂಬಮ್, ತೆಲಂಗಾಣದ ಕಬ್ಬಡ್ಡಿ, ಜಾರ್ಖಂಡನ ಆರ್ಚರಿ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮಲ್ಲಕಂಬ, ಮಣಿಪುರದ ಮುಕ್ನಾ ಮತ್ತು ತಾಂಗ್ಟಾ, ಅಸ್ಸಾಂನ ಕೊಮ್ಲೆನೈ, ಪಂಜಾಬನ ಗಟ್ಕಾ ಕ್ರೀಡೆಗಳ ಪ್ರದರ್ಶನ ನಡೆಯಿತು.
ಪಂಜಾಬನ ಗಟ್ಕಾ ಹಾಗೂ ಮಣಿಪುರದ ಮುಕ್ನಾ ಮತ್ತು ತಾಂಗ್ಟಾ ಕ್ರೀಡೆಗಳು ಅತ್ಯಂತ ವಿಶೇಷವಾಗಿತ್ತು. ಈ ಎರಡೂ ಅತ್ಯಂತ ಸಹಾಸ ಕ್ರೀಡೆಗಳಾಗಿದ್ದರೂ ಯುವಕರು ಅತ್ಯಂತ ಎಚ್ಚರಿಕೆಯಿಂದ ಶಿಸ್ತು ಬದ್ಧವಾಗಿ ಪ್ರದರ್ಶ ಮಾಡುತ್ತಿದ್ದಂತೆ ಸ್ಥಳೀಯ ಜನರು ಶಿಳ್ಳೆ, ಚಪ್ಪಾಳೆ ಮೂಲಕ ಅವರಿಗೆ ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಘಾಟನೆ: ಇದಕ್ಕೂ ಪೂರ್ವದಲ್ಲಿ ಶಾಸಕ ಅಮೃತ ದೇಸಾಯಿ ಪ್ರದರ್ಶನಕ್ಕೆ ಚಾಲನೆ ನೀಡಿ ದೇಶದ ವಿವಿಧೆಡೆಯಿಂದ ಪ್ರದರ್ಶನ ನೀಡಲು ಆಗಮಿಸಿದ ಎಲ್ಲ ಯುವ ತಂಡಗಳಿಗೆ ಶುಭ ಕೋರಿ, ಆತ್ಮೀಯ ಧನ್ಯವಾದ ತಿಳಿಸಿದರು. ಬಯಲು ಸೀಮೆ ಅಭಿವೃದ್ಧಿ ಮಂಡಳಿ ತವನಪ್ಪ ಅಷ್ಟಗಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಪಂ ಸಿಇಒ ಡಾ. ಸುರೇಶ ಇಟ್ನಾಳ, ಇತರರು ಇದ್ದರು.
ನಂತರದಲ್ಲಿ ರಾಜ್ಯದ ದೇಸಿ ಕ್ರೀಡೆಗಳಾದ ಗೋಲಿ, ಲಗೋರಿ, ಚಿನ್ನಿ ದಾಂಡು ಕ್ರೀಡೆಗಳನ್ನು ಸಹ ಆಡುವ ಮೂಲಕ ಗಣ್ಯರು ಚಾಲನೆ ನೀಡಿದರು. ಶನಿವಾರದಿಂದ ರಾಜ್ಯದ ದೇಸಿ ಕ್ರೀಡೆಗಳ ಪ್ರದರ್ಶನ ಸಹ ನಡೆಯಲಿದೆ.