ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಶ್ರೀನಿವಾಸ್ ಉದ್ಘಾಟಿಸಿದರು. ಶ್ರೀರಾಮ ಸುಬ್ರಾಯ ಶೇಟ್, ಡಾ. ಕುಮಾರಸ್ವಾಮಿ, ಬಿ.ಎಸ್.ಭಗವಾನ್, ಸುನೀತಾ ಇತರರಿದ್ದರು. 
ಜಿಲ್ಲೆ

ಗಮಕ ಕಲೆ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರ

ತರೀಕೆರೆ: ಗಮಕ ಕಲೆ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾಗಿದೆ ಎಂದು ತಾಲೂಕು ಗಮಕ ಕಲಾ ಪರಿಷತ್ ತಾಲೂಕು ಅಧ್ಯಕ್ಷ ಡಾ. ಕುಮಾರಸ್ವಾಮಿ ಹೇಳಿದರು.

ರಂಗೇನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಪಠ್ಯಾಧಾರಿತ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳೇಗನ್ನಡದ ಪದ್ಯಗಳನ್ನು ಸಂಗೀತದ ಮೂಲಕ ಪ್ರಸ್ತುತಪಡಿಸಿದಾಗ ಕಿವಿಯಲ್ಲಿ ಇಂಪಾದ ಭಾವ ಮೂಡುವುದಲ್ಲದೆ ತಕ್ಷಣವೇ ಮನ ಮಟ್ಟುತ್ತದೆ. ಇಂಥ ಪ್ರಾಚೀನ ಕಲೆಗಳನ್ನು ರೂಢಿಸಿಕೊಂಡರೆ ಕಾವ್ಯದ ಮಹತ್ವ ತಿಳಿಯುತ್ತದೆ. ಮಕ್ಕಳು ಸಾಹಿತ್ಯಾಭಿರುಚಿ ರೂಢಿಸಿಕೊಂಡು ಕಲಿಕೆಯಲ್ಲಿ ನಿರತರಾಗಬೇಕಲ್ಲದೆ ಪ್ರತಿ ಹಂತದಲ್ಲೂ ಶಿಸ್ತುಬದ್ಧ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ತಾಲೂಕು ಗಮಕ ಕಲಾ ಪರಿಷತ್ ಗೌರವಾಧ್ಯಕ್ಷ ಬಿ.ಎಸ್.ಭಗವಾನ್ ಮಾತನಾಡಿ, ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳಲ್ಲಿ ಅಡಕವಾಗಿರುವ ಧರ್ಮ-ಅಧರ್ಮ ವಿಚಾರಧಾರೆಗಳನ್ನು ಮಕ್ಕಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಗಮಕಿ ಸುನೀತಾ, 10ನೇ ತರಗತಿ ಪಠ್ಯ ಭಾಗದಲ್ಲಿರುವ ಕುಮಾರವ್ಯಾಸ ಭಾರತದ ಭಾಮಿನಿ ಷಟ್ಪದಿ ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೆ, ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಶ್ರೀರಾಮ ಸುಬ್ರಾಯ ಶೇಟ್ ವ್ಯಾಖ್ಯಾನ ಮಾಡಿದರು.

ಮುಖ್ಯ ಶಿಕ್ಷಕ ಶ್ರೀನಿವಾಸ್, ಸಹ ಶಿಕ್ಷಕರಾದ ಪುಷ್ಪಾ, ರಾಜೇಶ್ವರಿ, ದಾನಿ ಶ್ರೀಕಂಠಮೂರ್ತಿ, ನಿವೃತ್ತ ಪ್ರಾಧ್ಯಾಪಕ ಹೊರಕೆರೆ ದೇವೇಂದ್ರಪ್ಪ ಮತ್ತಿತರರಿದ್ದರು.