ಚಿಕ್ಕಮಗಳೂರು: ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಪೌರ ನೌಕರರು ಹಾಗೂ ಪೌರ ಕಾರ್ಮಿಕರು ಕಳೆದ ಮೂರು ದಿನಗಳಿಂದ ಪಟ್ಟು ಹಿಡಿದು ಕುಳಿತಿದ್ದಾರೆ. ಇದರ ಪರಿಣಾಮವಾಗಿ ನಗರದಲ್ಲಿ ಮೂರು ದಿನಗಳಿಂದ ಸ್ವಚ್ಛತೆ ಮಾಡುವವರೇ ಇಲ್ಲದೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದ ಚಿಕ್ಕಮಗಳೂರು ನಗರದ ಇದೀಗ ಕಸದ ನಗರವಾಗಿ ಪರಿವರ್ತನೆಯಾಗಿದೆ.
ಹೌದು. ಪೌರ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ನಡೆಸುತ್ತಿಲ್ಲ. ಜೊತೆಗೆ ಮನೆಮನೆಯಿಂದ ಕಸ ಸಂಗ್ರಹಣಾ ಕಾರ್ಯವನ್ನೂ ನಿಲ್ಲಿಸಿದ್ದಾರೆ. ಇದರಿಂದಾಗಿ ನಗರದ ಎಲ್ಲೆಂದರಲ್ಲಿ ಕಸದ ರಾಶಿಗಳು ಕಣ್ಣಿಗೆ ರಾಚುತ್ತಿವೆ. ಕಳೆದ ಮೂರು ದಿನಗಳಿಂದ ಕಸದ ರಾಶಿ ನಿರ್ಮಾಣವಾಗಿರುವುದರಿಂದ ಕಸ ಕೊಳೆತು ದುರ್ವಾಸನೆ ಬರಲಾರಂಭಿಸಿದೆ. ಇದರಿಂದಾಗಿ ನಗರದ ಪ್ರಮುಖ ಹಾಗೂ ಎಲ್ಲ ರಸ್ತೆಗಳಲ್ಲಿಯೂ ಜನ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಬುಧವಾರ ವಾರದ ಸಂತೆ ನಡೆಯುತ್ತದೆ. ಸಂತೆ ನಡೆದ ಮರುದಿನವೇ ಪೌರ ಕಾರ್ಮಿಕರು ಸಂತೆ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಆದರೆ ಇದೀಗ ಪೌರ ಕಾರ್ಮಿಕರು ಮುಷ್ಕರ ಹೂಡಿರುವುದರಿಂದಾಗಿ ಸಂತೆ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವವರೇ ಇಲ್ಲವಾಗಿದೆ. ಇದರಿಂದಾಗಿ ಸಂತೆ ಮಾರುಕಟ್ಟೆ ಮಾತ್ರವಲ್ಲದೆ ಮಾರ್ಕೆಟ್ ರಸ್ತೆ ಸಹ ಗಬ್ಬೆದ್ದು ನಾರಲಾರಂಭಿಸಿದೆ.
ಇನ್ನು ಪ್ರತಿ ದಿನ ಪೌರ ಕಾರ್ಮಿಕರು ಪ್ರತಿ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದ್ದರು. ಇದರಿಂದಾಗಿ ನಗರ ಇದುವರೆಗೆ ಆದಷ್ಟು ಸ್ವಚ್ಛವಾಗಿ ಕಾಣುತ್ತಿತ್ತು. ಆದರೆ ಮೂರು ದಿನಗಳಿಂದ ಮನೆಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿಲ್ಲ. ಹೀಗಾಗಿ ಕೆಲ ದಿನಗಳಿಂದ ಮನೆಯಲ್ಲೇ ಕಸ ಕೊಳೆಯುತ್ತಿರುವುದರಿಂದಾಗಿ ಜನ ಖಾಲಿ ಜಾಗಗಳಲ್ಲಿ ಕಸವನ್ನು ಎಸೆಯಲಾರಂಭಿಸಿದ್ದಾರೆ. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿಯೇ ಕಸದ ರಾಶಿ ನಿರ್ಮಾಣಗೊಂಡಿದೆ.
ಕಸದ ಗಾಡಿ ಸೇವೆಯೂ ಇಲ್ಲ
ಪೌರ ಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಹೀಗಾಗಿ ಗಂಟೆ ಗಾಡಿಗಳನ್ನು ಬಳಸಿಕೊಂಡು ನಗರದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳೋಣ ಎಂದರೆ ಗಂಟೆ ಗಾಡಿ ನಿರ್ವಹಿಸುವ ಪೌರ ಕಾರ್ಮಿಕರು ಪ್ರತಿಭಟನ ನಿರತರಿಗೆ ಬೆಂಬಲ ಸೂಚಿಸಿ ತಾವೂ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ನಗರದಲ್ಲಿ ಸ್ವಚ್ಛತೆ ಎಂಬುದೇ ಇಲ್ಲವಾಗಿದೆ.
ನಗರಸಭೆ ಅಧಿಕಾರಿಗಳು ಗಂಟೆ ಗಾಡಿ ಪೌರ ಕಾರ್ಮಿಕರ ಮನವೊಲಿಸುವ ಕೆಲಸ ಮಾಡುತ್ತಿದ್ದಾರಾದರೂ ಅದು ಫಲಪ್ರಧವಾಗುತ್ತಿಲ್ಲ. ಜೊತೆಗೆ ಬೇರೆ ಯಾವುದೇ ಮೂಲದಿಂದಲೂ ಸ್ವಚ್ಛತಾ ಕಾರ್ಯ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾವಾಗಿದೆ.
ಸ್ವಚ್ಛತೆ ಮರೀಚಿಕೆ
ಬೇರೆ ಯಾವುದೇ ವಿಭಾಗದ ಕಾರ್ಮಿಕರು ಅಥವಾ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರೆ ಬೇರೆ ಕಾರ್ಮಿಕರನ್ನು ಬಳಸಿಕೊಂಡು ಆ ಕೆಲಸವನ್ನು ಪೂರ್ಣಗೊಳಿಸಬಹುದಿತ್ತು. ಆದರೆ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಲು ಬೇರೆ ಯಾವುದೇ ಕಾರ್ಮಿಕರು ಮುಂದೆ ಬರುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ವಚ್ಛತಾ ಕಾರ್ಯಕ್ಕೆ ಪೌರ ಕಾರ್ಮಿಕರೇ ಬರಬೇಕಾಗಿದೆ. ಆದರೆ ತಮ್ಮ ಬೇಡಿಕೆ ಈಡೇರುವವರೆಗೆ ತಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪೌರ ಕಾರ್ಮಿಕರು ಪಟ್ಟು ಹಿಡಿದು ಕುಳಿತಿರುವುದು ನಗರಾಡಳಿತದ ತಲೆನೋವಿಗೆ ಕಾರಣವಾಗಿದೆ.
ಪೌರ ಕಾರ್ಮಿಕರು ಹಾಗೂ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿAದಾಗಿ ನಗರದೆಲ್ಲೆಡೆ ಸ್ವಚ್ಛತೆ ಇಲ್ಲವಾಗಿದೆ. ಪೌರಕಾರ್ಮಿಕ ಮುಖಂಡರೊAದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಮಾತುಕತೆ ಫಲಪ್ರದವಾಗುತ್ತದೆ ಎಂಬ ನಿರೀಕ್ಷೆಯಿದೆ. ಬೇರೆ ಯಾವ ಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕೆ ಬರುವುದಿಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ.
ಬಿ.ಸಿ.ಬಸವರಾಜ್, ನಗರಸಭೆ ಆಯುಕ್ತ