ಬಾಗಲಕೋಟೆ: ಕಳೆದ ಎರಡು ದಶಕದಿಂದ ದೂರವಾಗಿರುವ ಬಾಗಲಕೋಟೆ ಲೋಕಸಭೆ ಕ್ಷೇತ್ರವನ್ನು ಮರಳಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಇದೀಗ ಹೊಸ ಅಸ್ತ್ರ ಪ್ರಯೋಗಿಸಲು ಚಿಂತನೆ ನಡೆಸಿದೆ.
ಸತತ ನಾಲ್ಕು ಬಾರಿ ಗೆದ್ದಿರುವ ಬಿಜೆಪಿಯ ಪಿ.ಸಿ.ಗದ್ದಿಗೌಡರ ಅವರನ್ನು ಮಣಿಸಲು ಪ್ರತಿಸಲವೂ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದ್ದರೂ ಕಾಂಗ್ರೆಸ್ ಯಶಸ್ಸು ಕಂಡಿಲ್ಲ. ಹೀಗಾಗಿ ಈ ಸಲ ಚುನಾವಣೆಯಲ್ಲಿ ಗದ್ದಿಗೌಡರ ಮತಬುಟ್ಟಿಯಲ್ಲಿ ಭದ್ರವಾಗಿರುವ ಸಮುದಾಯದ ಮತ ವಿಭಜನೆಗೆ ಕಾಂಗ್ರೆಸ್ ಮಾಸ್ಟರ್ ಪ್ಲಾೃನ್ ಮಾಡಿದೆ.
ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ವಿರುದ್ಧ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರನ್ನು ರಣಕಲಿಯಾಗಿ ಇಳಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಈಗಾಗಲೇ ಈ ಕುರಿತು ಪಕ್ಷದ ಕೆಲ ಹಿರಿಯರು ನ್ಯಾಮಗೌಡ ಅವರನ್ನು ಸಂಪರ್ಕಿಸಿದ್ದು, ಮಾತುಕತೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ 2004 ರಿಂದ ಸತತ ನಾಲ್ಕು ಸಲ ಗೆಲ್ಲುತ್ತಲೇ ಬಂದಿದ್ದಾರೆ. ಮತ ಗಳಿಕೆ ಪ್ರಮಾಣವೂ ಹೆಚ್ಚುತ್ತಲೇ ಬಂದಿದೆ. ಕ್ಷೇತ್ರದಲ್ಲಿ ಪ್ರಬಲವಾಗಿರುವ ಗಾಣಿಗ ಸಮುದಾಯ ಗೌಡರ ಬೆಂಬಲಕ್ಕೆ ನಿಲ್ಲುತ್ತ ಬಂದಿದೆ. ಆ ಮತಗಳು ವಿಭಜನೆ ಮಾಡದೆ ಕಾಂಗ್ರೆಸ್ ಗೆಲುವು ಕಷ್ಟ ಎನ್ನುವುದು ಕಾಂಗ್ರೆಸ್ ಕಂಡುಕೊಂಡಿರುವ ಮಾರ್ಗ. ಹೀಗಾಗಿ ಅದೇ ಸಮುದಾಯದ ಆನಂದ ನ್ಯಾಮಗೌಡ ಅವರನ್ನು ಅಭ್ಯರ್ಥಿ ಮಾಡಿದಲ್ಲಿ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಹೇಗಿದ್ದರೂ ಬರುತ್ತವೆ. ಜತೆಗೆ ಕಾಂಗ್ರೆಸ್ ಗ್ಯಾರಂಟಿ ಮತ್ತು ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಶಾಸಕರು ಇರುವುದು ಪ್ಲಸ್ ಪಾಯಿಂಟ್. ಇದರ ಜತೆಗೆ ಬಿಜೆಪಿಗೆ ಹೋಗುವ ಗಾಣಿಗ ಸಮಾಜದ ಮತಗಳಲ್ಲಿ ಅರ್ಧದಷ್ಟು ಮತಗಳು ಅದೇ ಸಮುದಾಯದ ಆನಂದ ನ್ಯಾಮಗೌಡರಿಗೆ ವಿಭಜನೆ ಆದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಲೆಕ್ಕಾಚಾರ ಮಾಡಿದೆ. ಹೀಗಾಗಿ ಗದ್ದಿಗೌಡರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಆನಂದ ನ್ಯಾಮಗೌಡ ಸೂಕ್ತ ಎನ್ನುವ ಚರ್ಚೆಗಳು ನಡೆದು, ಆನಂದ ಅವರನ್ನು ಈಗಾಗಲೇ ವರಿಷ್ಠರು ಸಂಪರ್ಕ ಮಾಡಿದ್ದಾರೆ. ಆದರೆ, ಲೋಕಸಭೆಗಿಂತಲೂ ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ಅಪೇಕ್ಷೆ ಹೊಂದಿರುವ ಆನಂದ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಜಮಖಂಡಿ ಕ್ಷೇತ್ರಕ್ಕೆ ಅವರಿಗೇ ಟಿಕೆಟ್ ಕೊಡುವ ಅಭಯವನ್ನು ವರಿಷ್ಠರು ನೀಡಿದ್ದಾರಂತೆ.
1991ರಲ್ಲಿ ಅಂದು ಪ್ರಧಾನಮಂತ್ರಿ ಹುದ್ದೆಗೆ ಹೆಸರು ಕೇಳಿ ಬಂದಿದ್ದ ರಾಮಕೃಷ್ಣ ಹೆಗಡೆ ಅವರು ಬಾಗಲಕೋಟೆಯಿಂದ ಸ್ಪರ್ಧೆ ಮಾಡಿದ್ದರು. ಹೆಗಡೆ ಅವರನ್ನು ಸೋಲಿಸಿಯೇ ತೀರಬೇಕೆಂದು ಪಣ ತೊಟ್ಟಿದ್ದ ಅಂದಿನ ಸಿಎಂ ಬಂಗಾರಪ್ಪ ಅವರು ಸಿದ್ದು ನ್ಯಾಮಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಿದ್ದರು. ಅಂದು ರಾಜಕೀಯ ಕ್ಷೇತ್ರಕ್ಕೆ ಪರಿಚಿತವಲ್ಲದ ಬ್ಯಾರೇಜ್ ಸಿದ್ದು ಅವರನ್ನು ಹೆಗಡೆ ವಿರುದ್ಧ ತಂದು ನಿಲ್ಲಿಸಿದ್ದರು. ನೋಡ ನೋಡ್ತಿದ್ದಂತೆ ಇಡೀ ಚುನಾವಣೆ ವಾತಾವರಣ ಬದಲಾಗಿ ರಾಷ್ಟ್ರನಾಯಕ ಹೆಗಡೆ ಸೋಲು ಕಂಡು ಅಪರಿಚಿತ ಸಿದ್ದು ನ್ಯಾಮಗೌಡ ಗೆಲುವಿನ ಕೇಕೆ ಹಾಕಿದ್ದರು.
ಇದೇ ಕಾರಣಕ್ಕೆ ಅಂದು ಸಿದ್ದು ಅವರನ್ನು ಕೇಂದ್ರದಲ್ಲಿ ಮಂತ್ರಿ ಸಹ ಮಾಡಲಾಗಿತ್ತು. ಸಿದ್ದು ನ್ಯಾಮಗೌಡ ಅವರು ಗಾಣಿಗ ಸಮುದಾಯದ ಲೀಡರ್ ಆಗಿದ್ದವರು. ಇವತ್ತಿಗೂ ನ್ಯಾಮಗೌಡ ಕುಟುಂಬದ ಬಗ್ಗೆ ಆ ಗೌರವ ಇದೆ. ಇದನ್ನೆ ಬಳಕೆ ಮಾಡಿಕೊಂಡು ಈ ಸಲ ಲೋಕಸಭೆ ಚುನಾವಣೆಯಲ್ಲಿ ಆನಂದ ನ್ಯಾಮಗೌಡ ಅವರನ್ನು ಅಭ್ಯರ್ಥಿಯನ್ನಾಗಿಸಿದರೆ ಪಕ್ಷಕ್ಕೆ ಪ್ಲಸ್ ಆಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
ಹತ್ತು ಜನ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಹತ್ತು ಜನ ಆಕಾಂಕ್ಷಿಗಳು ಇದ್ದಾರೆ. ಅವರಲ್ಲಿ ಕಳೆದ ಸಲದ ಅಭ್ಯರ್ಥಿ ವೀಣಾ ಕಾಶಪ್ಪನವರ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಹೆಸರು ಮುಂಚೂಣಿಯಲ್ಲಿದೆ. ಇದೀಗ ಆನಂದ ನ್ಯಾಮಗೌಡ ಬಗ್ಗೆ ಪಕ್ಷ ಒಲವು ವ್ಯಕ್ತಪಡಿಸಿದ್ದು, ಇದಕ್ಕೆ ನ್ಯಾಮಗೌಡ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ನ್ಯಾಮಗೌಡ ಅವರು ಟಿಕೆಟ್‌ಗಾಗಿ ಅರ್ಜಿಯನ್ನು ಹಾಕಿಲ್ಲ. ನಾನು ಆಕಾಂಕ್ಷಿ ಎಂದೂ ಹೇಳಿಕೊಂಡಿಲ್ಲ.
ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಸ್ಪರ್ಧೆ ಮಾಡುವಂತೆ ವರಿಷ್ಠರು ಸಂಪರ್ಕಿಸಿದ್ದು ನಿಜ. ಆದರೆ, ಈ ವಿಚಾರದಲ್ಲಿ ನಾನು ಯಾವುದೇ ನಿರ್ಧಾರವನ್ನು ಈ ಕ್ಷಣದವರೆಗೂ ತೆಗೆದುಕೊಂಡಿಲ್ಲ. ಆನಂದ ನ್ಯಾಮಗೌಡ, ಮಾಜಿ ಶಾಸಕರು, ಜಮಖಂಡಿ