ಗದಗ: ನಗರದ ರಂಗನವಾಡಿ ಗಲ್ಲಿ ಪ್ರದೇಶ ಕರೊನಾ ವೈರಸ್ ಹಾಟ್ ಸ್ಪಾಟ್ ಆಗಿದ್ದು, ನಾಲ್ಕನೇ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 24 ವರ್ಷದ (ಪಿ 396) ಪುರುಷನಿಗೆ ಕರೊನಾ ವೈರಸ್ ಇರುವುದು ದೃಢಪಟ್ಟಿದೆ. ಈಗಾಗಲೇ ದೃಢಪಟ್ಟಿರುವ ಮೂರು ಕೇಸ್ ಪತ್ತೆಯಾಗಿರುವ ರಂಗನವಾಡಿ ಗಲ್ಲಿಯಿಂದಲೇ ನಾಲ್ಕನೇ ಕೇಸ್ ಪತ್ತೆಯಾಗಿದೆ.
ಗದಗ ನಗರದ ರಂಗನವಾಡಿ ಗಲ್ಲಿಯ ಎರಡನೇ ಕೇಸ್ (ಪಿ-304) ಮೃತ ಮೊದಲ ಪಾಸಿಟಿವ್ ಕೇಸ್ (ಪಿ-166) ಆಪ್ತರಾಗಿದ್ದರು. ಮೂರನೇ ಕೇಸ್ ವ್ಯಕ್ತಿ (ಪಿ-370) ಎರಡನೇ ಕೇಸ್ (ಪಿ-304) ದ್ವಿತೀಯ ಸಂಪರ್ಕದಲ್ಲಿದ್ದರು. ನಾಲ್ಕನೇ ಕೇಸ್ (ಪಿ 396) ಮೂರನೇ ಕೇಸ್ (ಪಿ 370) ಪುರುಷನೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದರು ಎಂದು ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಮೊದಲ ಪಾಸಿಟಿವ್ ಕೇಸ್ ಏ. 6ರಂದು 80ರ ವಯಸ್ಸಿನ ವೃದ್ಧೆಯಲ್ಲಿ ದೃಢಪಟ್ಟಿತ್ತು. ಆ ವೃದ್ಧೆ ಏ. 8ರಂದು ಮೃತಪಟ್ಟರು. ಎರಡನೇ ಕೇಸ್ ಏ. 16ರಂದು ದೃಢಪಟ್ಟಿತ್ತು. ಏ.18ರಂದು ಮೂರನೇ ಕೇಸ್ ದೃಢಪಟ್ಟಿದೆ. ಏ. 20ರಂದು ನಾಲ್ಕನೇ ಪ್ರಕರಣ ಪತ್ತೆಯಾಗಿದೆ. 14 ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ನಾಲ್ಕು ಕರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ಆರೋಗ್ಯ ಕೇಂದ್ರ ಆರಂಭ
ನಗರದ ರಂಗನವಾಡಿಗಲ್ಲಿ ಕರೊನಾ ಹಾಟ್ಸ್ಪಾಟ್ ಆಗಿದ್ದು, ದಿನದಿನಕ್ಕೆ ಅದೇ ಪ್ರದೇಶದಿಂದ ಪ್ರಕರಣಗಳು ಪತ್ತೆಯಾಗುತ್ತಿರುವುದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಈಗಾಗಲೇ ರಂಗನವಾಡಿ ಗಲ್ಲಿಯ 120ಕ್ಕೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಆ ಪ್ರದೇಶದಲ್ಲಿ ಸಂಪೂರ್ಣವಾಗಿ ಸ್ಯಾನಿಟೈಸರ್ ಸಿಂಪಡಿಸಿ ಶುಚಿಗೊಳಿಸಲಾಗಿದೆ. ಜತೆಗೆ ರಂಗನವಾಡಿಗಲ್ಲಿ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಮಾಡಲಾಗಿದ್ದು, ಯಾರನ್ನೂ ಒಳ ಹೋಗಲು, ಹೊರಗೆ ಬರಲು ಬಿಡುತ್ತಿಲ್ಲ. ಬ್ಯಾರಿಕೇಡ್ ಹಾಕಿ ಸೀಲ್ಡೌನ್ ಮಾದರಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ, ರಂಗನವಾಡಿ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಆರೋಗ್ಯ ತಪಾಸಣೆಗಾಗಿ ಡಂಬಳ ನಾಕಾದಲ್ಲಿ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ.
ಗದಗ ನಗರದ ರಂಗನವಾಡಿ ಪ್ರದೇಶದಲ್ಲಿಯೇ ಮೂರು ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಏರಿಯಾದಲ್ಲಿ ಹೈ ಅಲರ್ಟ್ ಘೊಷಣೆ ಮಾಡಲಾಗಿದ್ದು, ಇನ್ನೂ 200 ಸೋಂಕು ಶಂಕಿತರ ವರದಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಕಂಟೇನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ‘ರಂಗನವಾಡಿ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಈಗಾಗಲೇ ಘೊಷಣೆ ಮಾಡಲಾಗಿದೆ. ರಂಗನವಾಡಿ ಪ್ರದೇಶದಲ್ಲಿ ಜಿಲ್ಲಾಡಳಿತದಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ’ ಎಂದು ಹೇಳಿದರು.
ಮುಂಜಾಗ್ರತೆ ಕ್ರಮ...
ಗದಗ-ಬೆಟಗೇರಿ ನಗರದ ನಿವಾಸಿ 42 ವರ್ಷದ ಪುರುಷ (ಪಿ 370) ಕರೊನಾ ಸೋಂಕು ದೃಢಪಟ್ಟಿತ್ತು. ಇವರು ಪಿ 304 ಪ್ರಕರಣದ ದ್ವಿತೀಯ ಸಂಪರ್ಕದಲ್ಲಿದ್ದರು. ಇವರಿಗೆ ತಂದೆ-ತಾಯಿ, ಪತ್ನಿ, ಇಬ್ಬರು ಮಕ್ಕಳಿದ್ದು, ಸದ್ಯ ಎಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ನಿಗಾದಲ್ಲಿರಿಸಲಾಗಿತ್ತು. ಅಲ್ಲದೆ, ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ನಾಲ್ಕು ಪ್ರಕರಣಗಳು ನೆಗೆಟಿವ್ ಬಂದಿದ್ದು, 1 ಪ್ರಕರಣದ ವರದಿಯನ್ನು ಭಾನುವಾರ ತಡೆಹಿಡಿಯಲಾಗಿತ್ತು. ತಡೆಹಿಡಿದ ಪ್ರಕರಣವೇ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮೊದಲ ಪರೀಕ್ಷೆ ಯಶಸ್ವಿ
ಗದಗ ನಗರದ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್್ಸ) ಮಹಾವಿದ್ಯಾಲಯದಲ್ಲಿರುವ ಕೋವಿಡ್ ಲ್ಯಾಬ್ನಲ್ಲಿ ಮೊದಲ ಗಂಟಲು ದ್ರವ ಮಾದರಿಯ ಪರೀಕ್ಷೆ ಯಶಸ್ವಿಯಾಗಿ ನಡೆಯಿತು ಎಂದು ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ. ಕೋವಿಡ್ 19 ಪ್ರಕರಣವನ್ನು ಟ್ರೂನಾಟ್ ಪಿಸಿಆರ್ ಯಂತ್ರದ ಮೇಲೆ ಪರೀಕ್ಷೆ ನಡೆಸಿದ ರಾಜ್ಯದ ಮೊದಲ ಸಂಸ್ಥೆ ಮತ್ತು ಈ ಪರೀಕ್ಷೆಗೆ ಐಸಿಎಂಆರ್ನಿಂದ ಅನುಮತಿ ಪಡೆದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಗದಗ ಜಿಮ್ಸ್ ಪಾತ್ರವಾಗಿದೆ. ಬೆಂಗಳೂರಿನಲ್ಲಿ ಇರುವ ಇದೇ ಮಾದರಿಯ ಬೃಹತ್ ಯಂತ್ರ ದಿನಕ್ಕೆ 96 ಟೆಸ್ಟ್ ಫಲಿತಾಂಶಗಳನ್ನು ಒದಗಿಸಿದರೆ, ಗದಗನ ಜಿಮ್ಸ್ನಲ್ಲಿರುವ ಕಡಿಮೆ ಸಾಮರ್ಥ್ಯದ ಯಂತ್ರದಲ್ಲಿ ಗಂಟೆಗೆ ಒಂದು ಟೆಸ್ಟ್ ಫಲಿತಾಂಶ ಪಡೆಯಬಹುದು. ನಮ್ಮಲ್ಲಿ ಇಂತಹ ಎರಡು ಯಂತ್ರಗಳಿದ್ದು ದಿನಕ್ಕೆ ತಲಾ 24ರಂತೆ 48 ಟೆಸ್ಟ್ ಫಲಿತಾಂಶಗಳನ್ನು ಪಡೆಯಬಹುದು. ರಾಜ್ಯದ ಎಲ್ಲ ಮೆಡಿಕಲ್ ಕಾಲೇಜ್ಗಳಲ್ಲಿ ಈ ಯಂತ್ರಗಳಿವೆ. ಆದರೆ, ಮೊದಲ ಬಾರಿಗೆ ಅದನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಂಡಿದ್ದು ಜಿಮ್ಸ್ ಎಂಬುದು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.