ಜಿಲ್ಲೆ

ಗದಗ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಬಯೋಪ್ಯೂರಿಫೈಯರ್

ಗದಗ: ಗದಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅಭಿಮಾನಿ ಬಳಗ ಹಾಗೂ ಸ್ನೇಹಿತರ ವತಿಯಿಂದ ಭಾನುವಾರ ಕರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಜೀವ ರಕ್ಷಣೆಗಾಗಿ 15 ಲಕ್ಷ ರೂ. ಮೌಲ್ಯದ ಬಯೋಪ್ಯೂರಿಫೈಯರ್ (ಜೈವಿಕ ಶುದ್ಧೀಕರಣ) ಯಂತ್ರವನ್ನು ನಗರದ ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾನವಾಗಿ ನೀಡಲಾಯಿತು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರು ಯಂತ್ರವನ್ನು ಹೆರಿಗೆ ಆಸ್ಪತ್ರೆಗೆ ಹಸ್ತಾಂತರಿಸಿದರು.

ಇದಕ್ಕೂ ಮುನ್ನ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಯೋಪ್ಯೂರಿಫೈಯರ್ ಯಂತ್ರದ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಬೆಂಗಳೂರಿನ ವೈದ್ಯ ಮರಳಿ ಮೋಹನ್ ನೇತೃತ್ವದಲ್ಲಿ ಸಂಶೋಧಿಸಿರುವ ನೂತನ ಯಂತ್ರವನ್ನು ಈಗಾಗಲೇ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಉಚಿತವಾಗಿ ಕೊಡಮಾಡಲಾಗಿದೆ. ಕೋವಿಡ್-19 ಸೋಂಕಿನ ವಿರುದ್ಧ ಹೋರಾಟ ನಡೆಸಿರುವ ವೈದ್ಯರು ಸಹ ಮನುಷ್ಯರು, ಅವರಿಗೂ ಕುಟುಂಬ ಇರುತ್ತದೆ. ಆದರೂ, ಅವರು ಜನರ ಪ್ರಾಣ ಉಳಿಸಲು ಶ್ರಮಿಸುತ್ತಿದ್ದಾರೆ. ಇಂತಹ ಸೇನಾನಿಗಳ ಜೀವ ಅಮೂಲ್ಯವಾದದ್ದು. ಅವರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

ವೈರಸ್ ಸಾಯಿಸುವ ಯಂತ್ರ: ಕೋವಿಡ್-19 ಆಸ್ಪತ್ರೆಗಳು ಹವಾನಿಯಂತ್ರಿತವಾಗಿದ್ದು, ಇಂತಹ ವಾತಾವರಣದಲ್ಲಿ ವೈರಸ್ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಬಯೋಪ್ಯೂರಿಫೈಯರ್ ಯಂತ್ರವು ಆ ಪ್ರದೇಶದಲ್ಲಿರುವ ಕರೊನಾ ವೈರಸ್ ಸೇರಿ ಎಲ್ಲ ತರಹದ ವೈರಸ್​ಗಳನ್ನು ಹಿಡಿದಿಟ್ಟುಕೊಂಡು ಕೇವಲ ಅರ್ಧ ಗಂಟೆಯಲ್ಲಿ ಸಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಯಂತ್ರ ಬಳಕೆಯಿಂದ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ನಿರಾತಂಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅನಿಲ ಮೆಣಸಿನಕಾಯಿ ವಿವರಿಸಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಮಾತನಾಡಿ, ಅನಿಲ ಮೆಣಸಿನಕಾಯಿ ಅವರ ಒತ್ತಾಸೆ ಮೇರೆಗೆ ಬೆಂಗಳೂರಿನ ಅವರ ಸ್ನೇಹಿತರ ಬಳಗ ಮತ್ತು ಗದಗ ವಿಧಾನಸಭೆ ಕ್ಷೇತ್ರದ ಅಭಿಮಾನಿ ಬಳಗದ ಪದಾಧಿಕಾರಿಗಳ ಸಹಾಯ, ಸಹಕಾರದಿಂದ 15 ಲಕ್ಷ ರೂ. ಮೌಲ್ಯದ ಯಂತ್ರವನ್ನು ಹೆರಿಗೆ ಆಸ್ಪತ್ರೆಗೆ ನೀಡಲಾಗಿದೆ ಎಂದರು.

ವಿಪ ಮಾಜಿ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯ ಸಿಬ್ಬಂದಿಯ ರಕ್ಷಣೆಗೆ ಹೆರಿಗೆ ಆಸ್ಪತ್ರೆಗೆ ಬಯೋಪ್ಯೂರಿಫೈಯರ್ ಯಂತ್ರವನ್ನು ಉಚಿತವಾಗಿ ನೀಡಿರುವುದು ಶ್ಲಾಘನೀಯ. ಅನಿಲ ಮೆಣಿಸಿನಕಾಯಿ ಅನುಕರಣೀಯ ಕೆಲಸ ಮಾಡಿದ್ದಾರೆ ಎಂದರು.

ಆರ್​ಎಸ್​ಎಸ್ ಮುಖಂಡ ವಿಜಯ ಮಹಾಂತೇಶ, ಬಿಜೆಪಿ ಮುಖಂಡ ಎಂ.ಎಸ್. ಕರಿಗೌಡರ ಮಾತನಾಡಿದರು.

ಬೆಂಗಳೂರಿನ ವೈದ್ಯ ಡಾ. ಮುರಳಿ ಮೋಹನ ಅವರು ಬಯೋಪ್ಯೂರಿಫೈಯರ್ ಯಂತ್ರದ ಕುರಿತು ವಿವರಣೆ ನೀಡಿದರು. ಡಾ. ಪ್ರಮೋದ, ಬಿಜೆಪಿ ಮುಖಂಡ ಕಾಂತಿಲಾಲ ಬನ್ಸಾಲಿ, ಬಸವರಾಜ ನಾಗಲಾಪೂರ ವೇದಿಕೆ ಮೇಲಿದ್ದರು. ಅನಿಲ ಅಬ್ಬಿಗೇರಿ ಸ್ವಾಗತಿಸಿದರು. ರಾಘವೇಂದ್ರ ಯಳವತ್ತಿ ನಿರೂಪಿಸಿದರು.