ಗದಗ
ವೀರರಾಣಿ ಕಿತ್ತೂರ ಚನ್ನಮ್ಮ ಅವರ ಹೋರಾಟದುದ್ದಕ್ಕೂ ಸ್ವಾಭೀಮಾನ, ದೇಶಾಭಿಮಾನ ನಿರಂತರವಾಗಿತ್ತು. ರಾಣಿ ಚನ್ನಮ್ಮನ ಪ್ರೇರಣೆಯೊಂದಿಗೆ ಪ್ರತಿಯೊಬ್ಬರು ಸ್ವಾಭಿಮಾನಿ, ದೇಶಾಭಿಮಾನಿಗಳಾಗಬೇಕೆಂದು ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಲಕ್ಕುಂಡಿಯ ಬಿ.ಎಚ್.ಪಾಟೀಲ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಐತಿಹಾಸಿಕ ಲಕ್ಕುಂಡಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ವೀರರಾಣಿ ಕಿತ್ತೂರ ಚನ್ನಮ್ಮ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೀರರಾಣಿ ಕಿತ್ತೂರ ಚನ್ನಮ್ಮ ೧೮೫೭ರಲ್ಲಿಯೇ ಸ್ವಾತಂತ್ರ್ಯಗೊಸ್ಕರ ಬ್ರಿಟಿಷರ ವಿರುದ್ಧ ಹೋರಾಟದ ಕಿಚ್ಚು ಹಚ್ಚಿಸಿದ ಧೀರ ಮಹಿಳೆ. ಇವರ ಹೋರಾಟದಿಂದ ಬ್ರಿಟಿಷರ ಎದೆಯಲ್ಲಿ ನಡುಕು ಹುಟ್ಟಿಸಿದ ಧೀಮಂತ ನಾಯಕಿ. ರಾಣಿ ಚನ್ನಮ್ಮ ಸ್ವಾತಂತ್ರ್ಯ ಭಾರತದ ಬೆಳ್ಳಿಚುಕ್ಕಿ ಎಂದು ಸಚಿವರು ಕೊಂಡಾಡಿದರು.
ಮುಂಬಯಿ ಕರ್ನಾಟಕ ಪ್ರಾಂತ್ಯಕ್ಕೆ ಕಿತ್ತೂರು ಚನ್ನಮ್ಮನ ಕೊಡುಗೆ ಹಾಗೂ ಸಾಧನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂಬಯಿ ಕರ್ನಾಟಕ ಪ್ರಾಂತ್ರ್ಯದ ಅಭಿವೃದ್ಧಿಗಾಗಿ ಕಿತ್ತೂರ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ನಾಂದಿ ಹಾಡಿದ್ದಾರೆ. ಕಿತ್ತೂರ ರಾಣಿ ಚನ್ನಮ್ಮ ನಾಟಕದ ಉದ್ದೇಶ ಪ್ರತಿಯೊಬ್ಬರಲ್ಲಿಯೂ ಸ್ವಾಭಿಮಾನ, ದೇಶಾಭಿಮಾನ, ಧೀರತೆ, ವೀರತೆಯಿಂದ ಬದುಕ ಬೇಕೆಂಬುದಾಗಿದೆ. ಇಂದಿನ ಯುವಜನತೆ ರಾಣಿ ಚನ್ನಮ್ಮನ ಶೌರ್ಯ, ಧೈರ್ಯ, ಸ್ವಾಭಿಮಾನ ಅರಿಯುವ ಮೂಲಕ ಬದುಕು ಸಾಗಿಸುವಂತೆ ಸಿ.ಸಿ. ಪಾಟೀಲ ತಿಳಿಸಿದರು.
ಧಾರವಾಡದ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ ಅವರ ನಿರ್ದೇಶನದಲ್ಲಿ ೨೫೦ಕ್ಕೂ ಅಧಿಕ ಕಲಾವಿದರನ್ನೊಳಗೊಂಡ ಸಜೀವ ಆನೆ, ಕುದುರೆ, ಒಂಟೆಗಳ ರಂಗಪ್ರವೇಶದೊಂದಿಗೆ ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಅದ್ಭುತವಾಗಿ ಪ್ರದರ್ಶನಗೊಳ್ಳುವ ಮೂಲಕ ಜನಮಣ್ಣನೆಗೆ ಪಾತ್ರವಾಗಿದೆ.
ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ. ಸಿ.ಇ.ಓ ಡಾ.ಸುಶೀಲಾ ಬಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಉಪವಿಭಾಗಾಧಿಕಾರಿ ಅನ್ನಪೂರ್ಣ ಸೇರಿದಂತೆ ಸ್ಥಳೀಯ ಜನಪತ್ರಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಫೋಟೋ
ಲಕ್ಕುಂಡಿ ಬಿ.ಎಚ್. ಪಾಟೀಲ ಕಾಲೇಜು ಮೈದಾನದಲ್ಲಿ ಶುಕ್ರವಾರ ರಾತ್ರಿ ಸಜೀವ ಆನೆ, ಒಂಟೆ, ಕುದುರೆಗಳೊಂದಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನಗೊಂಡಿತು.