ಮುಂಡರಗಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕವು ವಿವಿಧ ಸಂಘ, ಸಂಸ್ಥೆ ಮತ್ತು ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಮತ್ತು ನೇತ್ರದಾನ ಸಂಕಲ್ಪ ಶಿಬಿರ ಆಯೋಜಿಸಿತು.
ಶಿಬಿರದಲ್ಲಿ ಹೃದಯ ಪರೀಕ್ಷೆ, ಕ್ಯಾನ್ಸರ್ ಪರೀಕ್ಷೆ, ನೇತ್ರ ತಪಾಸಣೆ, ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡ, ರಕ್ತದ ಗುಂಪುಗಳ ಪರೀಕ್ಷೆ ಮಾಡಲಾಯಿತು. ಸುಮಾರು 300ಕ್ಕಿಂತ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 50ಜನರು ರಕ್ತದಾನ ಮಾಡಿದರು. 20ಜನ ನೇತ್ರದಾನ ಸಂಕಲ್ಪ ಮಾಡಿದರು.
ಶಿಬಿರಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ ಟಿ.ಎಸ್. ಮಾತನಾಡಿ, ನಮ್ಮ ಆರೋಗ್ಯ ರಕ್ಷಣೆಯ ಜೊತೆಗೆ ಕುಟುಂಬದ ಆರೋಗ್ಯ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡುವುದು ಅವಶ್ಯವಿದೆ. ರಕ್ತದಾನ, ನೇತ್ರದಾನದಂತಹ ಸಮಾಜಮುಖಿ ಕೆಲಸ ಮಾಡುವುದು ಸರ್ಕಾರಿ ನೌಕರರ ಆದ್ಯ ಕರ್ತವ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಹಳ್ಳಿ ಹಳ್ಳಿಕೇರಿ ಮಾತನಾಡಿ, ರಕ್ತದಾನ, ನೇತ್ರದಾನ ಸಂಕಲ್ಪ, ಆರೋಗ್ಯ ತಪಾಸಣೆಯಂತ ಸೇವಾ ಕೆಲಸಗಳನ್ನು ನಾವು ಮಾಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ಅನುಕೂಲ ಮಾಡಿದ ಸಂತೃಪ್ತಿ ಭಾವನೆ ನಮ್ಮಲ್ಲಿ ಮೂಡುತ್ತದೆ. ಇಂತಹ ಅತ್ಯುತ್ತಮ ಕೆಲಸಗಳಲ್ಲಿ ನಿರಂತರ ತೊಡಗಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ರವಿ ಗುಂಜಿಕರ ಮಾತನಾಡಿ, ನೌಕರರು ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸದೇ ಕಾಳಜಿ ವಹಿಸಿ ಉತ್ತಮ ಆರೋಗ್ಯದ ಹೊಂದಬೇಕು ಎಂದರು.
ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಬಳ್ಳಾರಿ, ಸಿಪಿಐ ವೀರಣ್ಣ ಹಳ್ಳಿ, ಕೆ.ಬಿ.ಕೊನ್ನೂರ, ಉದಯಕುಮಾರ ಯಲಿವಾಳ, ಡಾ.ಲಕ್ಷ್ಮಣ ಪೂಜಾರ, ಡಾ.ಶಂಕರ ಭಾವಿಮನಿ, ಡಾ.ಶ್ವೇತಾ ಪಾಟೀಲ, ಎಸ್.ಎಸ್.ಬಿಚ್ಚಾಲಿ,ಸುವರ್ಣ ಕೋಟಿ, ಶಂಕರ ಸರ್ವದೆ,ಬಿ.ಬಿ.ನಿಡಗುಂದಿ, ಮಂಜುನಾಥ ಕಳಬನವರ, ಅರುಂಧತಿ ಹೊನ್ನಪ್ಪನವರ, ಎಚ್.ಜಿ.ಪವಾರ, ಎಸ್.ಎನ್.ಪಾಟೀಲ, ಎ.ಡಿ.ಬಂಡಿ, ಶ್ರೀಕಾಂತ ಅರಹುಣಸಿ, ಎಂ.ಬಿ.ಕಳಕಂಬಿ, ಎಂ.ಎಂ.ಬಂಡಿ ಇತರರು ಇದ್ದರು.