ಗದಗ: ಗದಗ-ಬೆಟಗೇರಿ ಅವಳಿನಗರದಲ್ಲಿ ಹೋಳಿ ಹಬ್ಬದ ನಿಮಿತ್ತ ಶುಕ್ರವಾರ ಹಲಗೆ, ತಮಟೆಗಳ ಸದ್ದಿನ ಜತೆಗೆ ರಂಗು ರಂಗಿನ ಬಣ್ಣದ ಲೋಕ ಸೃಷ್ಟಿಯಾಗಿತ್ತು. ಸೂರ್ಯ ಉದಯಿಸುವ ಮುನ್ನವೇ ನಗರದ ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮಣ್ಣನ ಪ್ರತಿಕೃತಿ ದಹಿಸುತ್ತಿದ್ದಂತೆ ಆರಂಭವಾದ ಬಣ್ಣದಾಟ ಮಧ್ಯಾಹ್ನದವರೆಗೂ ಜನರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಕರೊನಾ ಭೀತಿಯ ನಡುವೆಯೂ ಯುವಕರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹುಣ್ಣಿಮೆಯ ನಂತರ 5ನೇ ದಿನವಾದ ಶುಕ್ರವಾರ ಟ್ರ್ಯಾಕ್ಟರ್, ಚಕ್ಕಡಿ ಮೇಲೆ ಕಾಮರತಿ ಮೂರ್ತಿಯನ್ನು ಕೂರಿಸಿ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮಾಡಿದರು. ಯುವಕರ ತಂಡಗಳು ಹಲಗೆ, ರಗ್ಗಲಗೆ, ತಮಟೆ ಬಾರಿಸುತ್ತ ಮೆರವಣಿಗೆಯುದ್ದಕ್ಕೂ ಬಣ್ಣ ಎರಚುತ್ತ ಸಾಗುವ ದೃಶ್ಯ ಸಾಮಾನ್ಯವಾಗಿತ್ತು. ಬೈಕ್ ಮೇಲೆ ಕೇಕೆ ಹಾಕುತ್ತ ಸಾಗುತ್ತಿದ್ದ ಯುವಕರ ದಂಡು ಸಿಕ್ಕ ಸಿಕ್ಕವರಿಗೆ ಬಣ್ಣ ಎರಚಿ ಹ್ಯಾಪಿ ಹೋಳಿ, ಹ್ಯಾಪಿ ಹೋಳಿ ಎಂದು ಕುಣಿದಾಡಿದರು. ಹೋಳಿ ಹಬ್ಬದ ಹಿನ್ನಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಚಿನ್ನಾಭರಣ ಅಲಂಕೃತ ಕಾಮರತಿಯರ ಮೆರವಣಿಗೆ:
ಭಕ್ತರ ಇಷ್ಟಾರ್ಥ ಈಡೇರಿಸುವ ಕಿಲ್ಲಾ ಸರ್ಕಾರಿ ಕಾಮರತಿಯರಿಗೆ ಕೆಜಿಗಟ್ಟಲೇ ಚಿನ್ನಾಭರಣ ಹಾಕಿ ಮೆರವಣಿಗೆ ನಡೆಸಲಾಯಿತು. ತಮ್ಮ ಮನೆಯಲ್ಲಿನ ಚಿನ್ನಾಭರಣಗಳನ್ನು ಕಾಮರತಿಯರಿಗೆ ಹಾಕಿದರೆ ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಒಳ್ಳೆಯದಾಗುತ್ತದೆ. ಆ ಚಿನ್ನ ಉಳಿಯುವುದರೊಂದಿಗೆ ಮತ್ತೇ ಹೊಸ ಚಿನ್ನವನ್ನು ಖರೀದಿಸುವಷ್ಟು ಸಬಲತೆ ಬರುತ್ತದೆ ಎಂಬ ಪ್ರತೀತಿ ಇರುವುರಿಂದ ಅನೇಕ ಮಂದಿ ತಮ್ಮಲ್ಲಿರುವ ಚಿನ್ನಾಭರಣಗಳನ್ನು ಕಾಮರತಿಯರಿಗೆ ಹಾಕಿ ಸಂಭ್ರಮಿಸಿದರು. ಅಲ್ಲದೇ, ಪ್ರಸಕ್ತ ವರ್ಷ ಗದಗ-ಬೆಟಗೇರಿ ಕಾಮರತಿ ಉತ್ಸವ ಮಹಾಮಂಡಳಿ ವತಿಯಿಂದ ಸಾರ್ವಜನಿಕರಿಗೆ ಒಂದೇ ವೇದಿಕೆಯಡಿ ನಗರದಲ್ಲಿ ಕಾಮ-ರತಿ ಮೂರ್ತಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿತ್ತು. ನಗರದ ವೀರನಾರಾಯಣ ದೇವಸ್ಥಾನದ ಹತ್ತಿರ, ಖಾನತೋಟ, ಮದ್ಲಿಓಣಿ, ಗಂಗಾಪುರ ಪೇಟೆ, ನರಿಬಾವಿ ಓಣಿ, ಹಾಳದಿಬ್ಬ ಓಣಿ, ಒಕ್ಕಲಗೇರಿ ಓಣಿ ಸೇರಿ ಅವಳಿ ನಗರದ 16 ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮ-ರತಿಯರ ಮೂರ್ತಿಗಳ ಮೆರವಣಿಗೆ ಜರುಗಿತು.
ರಂಗಪಂಚಮಿ ರದ್ದು
ಲಕ್ಷ್ಮೇಶ್ವರ: ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಪಟ್ಟಣದಲ್ಲಿ ಸಾರ್ವಜನಿಕವಾಗಿ ಆಚರಿಸುವ ರಂಗಪಂಚಮಿ ಹಬ್ಬ ರದ್ದು ಪಡಿಸಲಾಗಿದೆ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಲಕ್ಷ್ಮೇಶ್ವರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ತಿಳಿಸಿದ್ದಾರೆ.
EndFragment