ಗದಗ ನಗರಕ್ಕೆ ನೀರು ಪೂರೈಸುವ ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್ 
ಜಿಲ್ಲೆ

ಗದಗ: ಬಿಜೆಪಿ-ಕಾಂಗ್ರೆಸ್ ಜಲ ಸಮರ

ಶಿವಾನಂದ ಹಿರೇಮಠ ಗದಗ,

ವಿಧಾನಸಭೆ ಚುನಾವಣಾ ಸಮೀಪಿಸುತ್ತಿದ್ದಂತೆ ನಗರಸಭೆಯ ಕಾಂಗ್ರೆಸ್ - ಬಿಜೆಪಿ ಸದಸ್ಯರ ನಡುವೆ ವಾಟರ್ ವಾರ್ ಶುರುವಾಗಿದೆ.
ಕಾಂಗ್ರೆಸ್ ಸರ್ಕಾರದ ಅವ„ಯಲ್ಲಿ ಅನುಷ್ಠಾನಗೊಂಡ ನಿರಂತರ ಕುಡಿಯುವ ನೀರು ಪೂರೈಕೆ(24/7) ಯೋಜನೆ ಅಸ್ತ್ರವಾಗಿ ಬಳಸಿಕೊಂಡು ಚುನಾವಣಾ ಕಣಕ್ಕೆ ಮುಂದಡಿ ಇಟ್ಟಿರುವ ಸದಸ್ಯರು, ನಗರದಲ್ಲಿ ನೀರಿನ ಸಮಸ್ಯೆ ತಲೆದೋರಲು ನೀವೇ ಕಾರಣ ಎಂದು ಒಬ್ಬರಿಗೊಬ್ಬರು ಬೊಟ್ಟು ಮಾಡುತ್ತಿದ್ದಾರೆ.
ನಗರದಲ್ಲಿ 10 ದಿನದಿಂದ 16 ದಿನಗಳ ಅಂತರದಲ್ಲಿ ನೀರು ಪೂರೈಕೆಯಾಗುತ್ತಿದ್ದು, ಕುಡಿಯುವ ನೀರಿಗಾಗಿ ನಗರಾದ್ಯಂತ ಪ್ರತಿಭಟನೆ ಶುರುವಾಗಿವೆ. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಕೂಡ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತಿದ್ದರು. ಮತ್ತೊಂದೆಡೆ ನೀರು ಪೂರೈಕೆ ನಿರ್ವಹಣೆ ಗುತ್ತಿಗೆ ಪಡೆದ ಕಂಪನಿಗೂ ನಗರಸಭೆ ಬಿಲ್ ಪಾವತಿ ಮಾಡದ ಹಿನ್ನೆಲೆ ವಾಲ್‍ಮನ್‍ಗಳು ಪಂಪೌಸ್ ಸ್ಥಗೀತಗೊಳಿಸಿ ಪ್ರತಿಭಟನೆ ನಡೆಸಿದ್ದರು. ನೀರು ಪೂರೈಕೆಯಲ್ಲಿ ಗಂಭೀರ ವ್ಯತ್ಯಾಸಗಳು ಕಂಡು ಬಂದಿದ್ದು ಸಾರ್ವಜನಿಕರು ನಗರಸಭೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಪಕ್ಷಗಳಿಗೆ ಪ್ರಬಲ ಅಸ್ತ್ರವಾಗಲಿದ್ದು, ನೇರವಾಗಿ ಜನಸಾಮಾನ್ಯರ ಮೇಲೆ ಈ ಸಮಸ್ಯೆ ಕರಿಛಾಯೆ ಬೀಳಲಿದೆ.

ಈಗಿರುವ ಸಮಸ್ಯೆ ಏನು?
ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್‍ನಿಂದ ತುಂಗಭದ್ರ ನದಿ ನೀರನ್ನು ಎತ್ತುವಳಿ ಮೂಲಕ ಗದಗ ನಗರಕ್ಕೆ ಪೂರೈಸುವ ಪೈಪ್‍ಲೈನ್ ಹತ್ತಾರು ಕಡೆ ಸೋರಿಕೆಯಾಗುತ್ತಿದೆ. 2 ಲಕ್ಷಕ್ಕೂ ಅ„ಕ ಜನಸಂಖ್ಯೆ ಹೊಂದಿರುವ ನಗರದ 44 ಸಾವಿರ ಮನೆಗಳಿಗೆ ಪ್ರತಿನಿತ್ಯ 30 ರಿಂದ 32 (ಮಿಲಿಯನ್ ಲೀಟರ್ ಪರ್ ಡೇ) ಎಂಎಲ್‍ಡಿ ನೀರಿನ ಅಗತ್ಯ ಇದೆ. 75 ಕಿಮೀ ಉದ್ದ ಇರುವ ಪೈಪ್‍ಲೈನ್ ಅಲ್ಲಲ್ಲಿ ಒಡೆದು 15 ರಿಂದ 18 ಎಂಎಲ್‍ಡಿ ನೀರು ಮಾರ್ಗಮಧ್ಯದಲ್ಲಿಯೇ ಸೋರಿಕೆಯಾಗುತ್ತಿದೆ. ನಗರಕ್ಕೆ 16 ರಿಂದ 18 ಎಂಎಲ್‍ಡಿ ನೀರು ಮಾತ್ರ ಪೂರೈಕೆ ಆಗುತ್ತಿದ್ದು, ನೀರಿನ ಹಾಹಾಕಾರ ಶುರುವಾಗಿದೆ.

ಬಿಜೆಪಿ ಆರೋಪ?
ಕಾಂಗ್ರೆಸ್ ಸರ್ಕಾರದ ಅವ„ಯಲ್ಲಿ ಈ ಯೋಜನೆ ಆರಂಭಗೊಂಡಿದ್ದು, 198 ಕೋಟಿ ವ್ಯಯಿಸಲಾಗಿದೆ. ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ನಗರದ 14 ವಲಯದಲ್ಲಿ 7 ವಲಯಗಳು ಮಾತ್ರ ಪೂರ್ಣಗೊಂಡಿದೆ. ಮುಂಡರಗಿಯಿಂದ ಗದಗ ವರೆಗೂ ಪೈಪ್‍ಲೈನ್ ಅಳವಡಿಕೆಯಲ್ಲಿ ಗುತ್ತಿಗೆದಾರ ಅಕ್ರಮ ಎಸಗಿದ್ದಾರೆ. 8 ಎಂಎಂ ಗಾತ್ರದ ಪೈಪ್ ಅಳವಡಿಸುವ ಬದಲಾಗಿ ಕೇವಲ 2 ಎಂಎಂ ಪೈಪ್‍ಲೈನ್ ಅಳವಡಿಸಿದ್ದರಿಂದ ನೀರಿನ ವೇಗಕ್ಕೆ ಪೈಪ್ ಒಡೆದು ನೀರು ಸೋರಿಕೆ ಆಗುತ್ತಿದೆ. ಕಾಂಗ್ರೆಸ್ ಮಾಡಿದ ತಪ್ಪನ್ನು ಸರಿ ಪಡಿಸುವುದರಲ್ಲಿ ಬಿಜೆಪಿಯ ಸಮಯ ವ್ಯರ್ಥವಾಗುತ್ತಿದೆ. ನಗರದಲ್ಲಿ ನೀರಿನ ಸಮಸ್ಯೆ ತಲೆದೋರಲು ಅಂದಿನ ಕಾಂಗ್ರೆಸ್ ಸರ್ಕಾರವೇ ಹೊಣೆ.

ಕಾಂಗ್ರೆಸ್ ಪ್ರತ್ಯಾರೋಪ:
ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಗವೇಂದ್ರ ಯಳವತ್ತಿ ಬೆಂಬಲಿತ ಎರಡು ಗುಂಪುಗಳಾಗಿ ಬಿಜೆಪಿ ಒಡೆದು ಇಬ್ಬಾಗವಾಗಿದೆ. ಹೀಗಾಗಿ ನೀರಿನ ಸಮಸ್ಯೆ ಬಗೆ ಹರಿಯುತ್ತಿಲ್ಲ. ಬಿಜೆಪಿಗೆ ಆಡಳಿತ, ತಾಂತ್ರಿಕ, ಇಚ್ಛಾಶಕ್ತಿ ಮತ್ತು ಒಗ್ಗಟ್ಟಿನ ಕೊರತೆ ಇದೆ. ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರ 35ನೇ ವಾರ್ಡಿನಲ್ಲೂ ನೀರು ಪೂರೈಕೆ ಆಗುತ್ತಿಲ್ಲ. ಕಳೆದ ಸಾಮÁನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿಲ್ಲ. ವಾಲ್‍ಮನ್‍ಗಳಿಗೆ ಸಂಬಳ ಕೊಟ್ಟಿಲ್ಲ. ಅಧ್ಯಕ್ಷರಿಗೆ ದಕ್ಷ ಆಡಳಿತ ಗೊತ್ತೇ ಇಲ್ಲ. ನೀರಿನ ಸಮಸ್ಯೆಬಗೆ ಹರಿಸಲು ವಿಶೇಷ ಸಭೆ ಕರೆದಿಲ್ಲ. ಬಿಜೆಪಿ ಅ„ಕಾರಕ್ಕೆ ಬಂದು ಒಂದು ವರ್ಷ ಕಳೆದರೂ 3 ಸಭೆ ಮÁತ್ರ ಕರೆದಿದ್ದಾರೆ.


ಕೋಟ್:
ಅಪೂರ್ಣ ಕಾಮಾಗಾರಿಯನ್ನು 2017ರಲ್ಲಿ ಅಂದಿನ ಶಾಸಕ ಎಚ್.ಕೆ. ಪಾಟೀಲ ಲೋಕಾರ್ಪಣೆ ಮಾಡಿದ್ದರು. ಬಿಜೆಪಿ ಸದಸ್ಯರು ವಿರೊಧ ಮಾಡಿದ್ದರಿಂದ ನಮ್ಮನ್ನು ಜೈಲಿಗೆ ಹಾಕಿದ್ದರು. ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಕಾಂಗ್ರೆಸ್ ಪಕ್ಷ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ. ಮನೆ ಹಂಚಿಕೆ ಸಮಯದಲ್ಲಿ ಅಧ್ಯಕ್ಷತೆ ವಹಿಸುವ ಸ್ಥಳೀಯ ಶಾಸಕರು ನೀರಿನ ಸಮಸ್ಯೆ ಬಗೆ ಹರಿಸುವುದಕ್ಕೆ ಮುಂದಾಳತ್ವ ವಹಿಸಲಿ. ನಗರದ ಪ್ರಥಮ ಪ್ರಜೆ ನಗರಸಭೆ ಅಧ್ಯಕ್ಷರನ್ನು ದಿಕ್ಕರಿಸಿ ಅಭಿವೃದ್ಧಿ ಕಾಗಮಾರಿಗೆ ಗುದ್ದಲಿ ಪೂಜೆ ನಡೆಸುವ ಕಾಂಗ್ರೆಸ್ ಪ್ರತಿನಿ„ಗಳು ಎಲ್ಲವನ್ನು ರಾಜಕಾರಣ ದೃಷ್ಟಿಯಿಂದಲೇ ನೋಡುತ್ತಾರೆ ಎಂದು ನಗರಸಭೆ ಸದಸ್ಯ ಹಾಗೂ ಶಹರ ಬಿಜೆಪಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಆರೋಪಿಸಿದ್ದಾರೆ

ಕೋಟ್:
ನೀರಿನ ಸಮಸ್ಯೆ ಆಲಿಸಲು ಸ್ಥಳ ಪರಿಶೀಲನೆಗೆ ಹೋಗುವ ನಗರಸಭೆ ಪೌರಾಯುಕ್ತರನ್ನು ನಗರಸಭೆ ಅಧ್ಯಕ್ಷರು ಪ್ರಶ್ನೆ ಮಾಡುತ್ತಾರೆ. ಪೌರಾಯುಕ್ತರು ಸರ್ಕಾರಿ ನೌಕರರಾಗಿದ್ದು ನಗರಸಭೆ ಅಧ್ಯಕ್ಷರು ಹೇಳಿದಂತೆ ಕೇಳುವ ಸ್ಥಾನ ಹೊಂದಿಲ್ಲ. ಪೌರಾಯುಕ್ತರನ್ನು ಏಕ ವಚನದಲ್ಲಿ ಸಂಬೋಧನೆ ಮಾಡುತ್ತಾರೆ. ಗುತ್ತಿಗೆದಾರರನ್ನು ಹೆದರಿಸಿ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ ಕರೆಯಲು ಆಡಳಿತ ಪಕ್ಷ ಬಿಜೆಪಿ ವಿಫಲವಾಗಿದೆ ಎಂದು ನಗರಸಭೆ ಪ್ರತಿಪಕ್ಷದ ನಾಯ ಎಲ್​.ಡಿ. ಚಂದಾವರಿ ಆರೋಪಿಸಿದ್ದಾರೆ.