ನಗರದಲ್ಲಿ ರಸ್ತೆ ಮತ್ತು ನೀರಿನ ಸಮಸ್ಯೆ ಹೇಳತೀರದಾಗಿದೆ. ಕೈಗಾರಿಕೆ ಇಲದೇ ಉದ್ಯೋಗ ಅರಿಸಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಜೆಡಿಎಸ್ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ಈ ಸಮಸ್ಯೆ ನಿವಾರಿಸುತ್ತೇವೆ ಮತ್ತು ಸ್ಥಳೀಯವಾಗಿ ಜೆಡಿಎಸ್ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಜೆಡಿಎಸ್ ಮುಖಂಡ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ ಬ್ಯಾಂಕ್ ಸೆಳೆಯಲು ರಾಷ್ಟ್ರೀಯ ಪಕ್ಷಗಳು ನಗರದಲ್ಲಿ ಕ್ರೀಡೆ ನಡೆಸುತ್ತಿವೆ. ಕಾಂಗ್ರೆಸ್ ಬಿಜೆಪಿ ನಡುವೆ ಕ್ರೀಡಾಂಗಣ ಪಡೆಯಲು ಪೈಪೋಟಿ ನಡೆದಿವೆ. ಆದರೆ, ನಾವು ಕ್ರೀಡೆ ನಡೆಸಲು ಕ್ರೀಡಾಂಗಣ ನೀಡಲಿಲ್ಲ ಎಂದು ಆರೋಪಿಸಿದ ಅವರು ಜೆ.ಡಿ.ಎಸ್ ಅಧಿಕಾರಕ್ಕೆ ಬಂದರೆ ಹೊಸ ಕ್ರೀಡಾಂಗಣ ಗದಗ ನಗರದಲ್ಲಿ ಸ್ಥಾಪಿಸಲಿದ್ದೇವೆ ಎಂದರು.
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ವಾಲ್ ಮನ್ ಗಳಿಗೆ ಕಳೆದ 7 ತಿಂಗಳಿಂದ ನಗರಸಭೆ ಸಂಬಳ ನೀಡಿಲ್ಲ. ನೀರಿನ ಸಮಸ್ಯೆ ಬಗೆ ಹರಿಸುವ ಬದಲಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಗೋವಿಂದಗೌಡ್ರ, ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ನೀರು ಪೂರೈಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಫೆ. 12 ರಂದು ನಗರದ ವೆಂಕಟೇಶ ಟಾಕೀಸ್ ಹತ್ತಿರ ಇರುವ ಗಣೇಶ ದೇವಸ್ಥಾನದಲ್ಲಿ ಪೂಜೆ ನಡೆಸುವ ಮೂಲಕ ಜೆಡಿಎಸ್ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಜಿಲ್ಲಾಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ ಚಾಲನೆ ನೀಡುವರು. ಶಾಪೂರ ಪೇಟಿ, ಜವುಳಗಲ್ಲಿ, ಗಂಗಾಪೂರ ಪೇಟೆ ಹಾಗೂ ಒಕ್ಕಲಗೇರಿ ಓಣಿಯಲ್ಲಿ ನಮ್ಮ ಪಾದಯಾತ್ರೆ ಮುಕ್ತಾಯಗೊಳ್ಳುವುದು. ಅಂದೇ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಿಗಲಿದೆ ಎಂದರು.
ಬ್ರಾಹ್ಮಣ ಸಮುದಾಯದ ವಿರುದ್ಧ ಎಚ್.ಡಿ.ಕೆ ಹೇಳಿಕೆ ಕುರಿತು ಮಾತನಾಡಿದ ಅವರು ಎಚ್.ಡಿ.ಕೆ ಅವರ ಮಾತನ್ನು ತಿರುಚಲಾಗಿದೆ. ಜಿಲ್ಲೆಯಲ್ಲಿ ಬ್ರಾಹ್ಮಣ ಸಮುದಾಯ ಎಂದಿಗೂ ಜೆಡಿಎಸ್ ಪರ ಇದೆ ಎಂದು ಹೇಳಿದರು.
ಬಸವಾರ ಅಪ್ಪಣ್ಣವರ, ಪ್ರಾನ್ಸಿಸ್ ಕಣಯ್ಯ, ಪ್ರಫೂಲ್ ಪುಣೇಕರ್, ಸಿರಾಜ್ ಕದಡಿ, ಅಂಬಾಜಿ ದಹಿಂಡೆ ಇತರರು ಇದ್ದರು.