ಜಿಲ್ಲೆ

ಗದಗ: ನಿಮ್ಮ ಉದ್ಧಾರ ನಿಮ್ಮ ಕೈಯಲ್ಲೇ: ನಿರ್ಭಯಾನಂದ ಶ್ರೀಗಳು

ಗದಗ: ದೇಹ ಮತ್ತು ಮನಸ್ಸು ಸದೃಢದ ಜೊತೆಗೆ ಛಲ, ಪ್ರಯತ್ನ ವಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದ ಆಶ್ರಮದ ನಿರ್ಭಯಾನಂದ ಶ್ರೀಗಳು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳಿಗೆ ಸಾಧನೆಯ ಕುರಿತು ಹಮ್ಮಿಕೊಂಡಿದ್ದ ಪ್ರೇರಣಾತ್ಮಕ ಹಾಗೂ ಮನೋಸ್ಥೆರ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಆಲದ ಬೀಜ ತನ್ನೊಳಗೆ ಬೃಹತ್​ ಆಲದ ಮರವನ್ನು ಹುದುಗಿಸಿ ಕೊಂಡಂತೆ, ಪ್ರತಿಯೊಬ್ಬ ಯುವಕ ಯುವತಿಯರಲ್ಲಿ ಅದ್ಭುತ ಶಕ್ತಿ ಅಡಗಿದೆ. ಆ ಶಕ್ತಿಯನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹ ನೀಡಿ ಉತ್ತಮ ಮಾರ್ಗದರ್ಶನ ಮಾಡಿದಾಗ ಮಾತ್ರ ಸಾಧನೆಯನ್ನು ಮಾಡಲು ಸಾಧ್ಯ. ಮಕ್ಕಳು ಶಿಸ್ತು, ಸಮಯ ಪ್ರಜ್ಞೆ ಒಳ್ಳೆಯ ಸಂಸ್ಕಾರ ಕಲಿತರೆ ಉತ್ತಮ ಪ್ರಜೆಗಳಾಗಿ ಸುಂದರವಾದ ಬದುಕು ಸಾಗಿಸಬಹುದು. ನಿನ್ನ ಉದ್ಧಾರ ನಿನ್ನ ಕೈಯಲ್ಲಿದೆ ಬೇರಾರ ಕೈಯಲ್ಲಿಲ್ಲ ಎಂಬ ಸಂದೇಶ ಭಗವದ್ಗೀತೆ ಯಲ್ಲಿದೆ ಎಂದರು.
ಜೀವನದಲ್ಲಿ ಆತ್ಮಹತ್ಯ ಬಗ್ಗೆ ಯೋಚಿಸಿದವರು ಒಳ್ಳೆಯ ಸಲಹೆ ಮಾರ್ಗದರ್ಶನ ದಿಂದ ಇಂದು ಅತ್ಯುನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಸಾಧನೆ ಪ್ರೇರಣೆ ಆದಾಗ ಮಾತ್ರ ನೀವು ಅದ್ಭುತ ವ್ಯಕ್ತಿಗಳಾಗುವಲ್ಲಿ ಯಾವ ಸಂದೇಹವಿಲ್ಲ ಎಂದು ನಿರ್ಭಯಾನಂದ ಶ್ರೀಗಳು ಉಪನ್ಯಾಸ ನೀಡಿದರು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಪ್ರಾಸ್ತಾವಿಕ ವಾಗಿ ಮಾತನಾಡಿ, ಸರ್ಕಾರದ ಯೋಜನೆಯನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಲು ಕ್ರೀಡಾ ಪಟುಗಳು ಕಷ್ಟ ಪಡುವದರ ಜೊತೆಗೆ ಇಷ್ಟಪಟ್ಟು ಅಭ್ಯಾಸ ಮಾಡಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಾಗ ಮಾತ್ರ ನಿಮ್ಮ ಹೆಸರು ಅಜರಾಮರ ವಾಗಿ ಉಳಿಯಲು ಸಾಧ್ಯ. ಕ್ರೀಡೆಯಲ್ಲಿ ಶಿಸ್ತು, ಸಮಯ ಪಾಲನೆ ಮತ್ತು ಪ್ರಾಮಾಣಿಕತೆಯು ನಿಮ್ಮ ಜೀವನ ರೂಪಿಸಲು ಸಹಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತರಬೇತುದಾರರು, ಇಲಾಖೆಯ ಸಿಬ್ಬಂದಿಗಳು ಹಾಗೂ ಕ್ರೀಡಾಪಟುಗಳ ಪಾಲಕರು,ಪೋಷಕರು ಉಪಸ್ಥಿತರಿದ್ದರು.