ಗದಗ: ಗದಗ ಬೆಟಗೇರಿ ನಗರಸಭೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಕೆದಕಿದಷ್ಟೂ ಬ್ರಹ್ಮಾಂಡವಾಗುತ್ತಿದೆ. ಕಾಮಗಾರಿಯಲ್ಲಿ ಪರ್ಸಂಟೇಜ್ ಪಡೆಯುವುದರ ಜತೆಗೆ ಕಟ್ಟಡ ಪರವಾನಗಿ, ಫಾಮ್ರ್ ನಂ 3 (ಕಂಪ್ಯೂಟರ್ ಉತಾರ), ನಿರಾಕ್ಷೇಪಣೆ ಪತ್ರ (ಎನ್ಒಸಿ), ಮಗ್ಗಗಳಿಗೆ ಪರವಾನಗಿ ಸೇರಿ ಮತ್ತಿತರ ಕೆಲಸ ಕಾರ್ಯಗಳಿಗೆ ಜನರು ಅಲೆದರೂ ಪ್ರಮಾಣಪತ್ರ ಸಿಗುತ್ತಿಲ್ಲ. ಆದರೆ, ಲಂಚ ಕೊಟ್ಟರೆ ಸಂಜೆ ವೇಳೆಗೆ ಕಾರ್ಯಸಿದ್ಧಿ.
ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ವಿುಕರ ಸಮುಚ್ಚಯ ನಿರ್ವಣಕ್ಕಾಗಿ ಜಮೀನಿಂದ ಮಣ್ಣನ್ನು ಹೊರಸಾಗಿಸುವ ಕಾಮಗಾರಿಯ ಬಿಲ್ ಪಾವತಿಸುವ ಕುರಿತು ಲಂಚದ ಬೇಡಿಕೆಯಿಟ್ಟು ಬಲೆಗೆ ಬಿದ್ದಿರುವ, ನಗರಸಭೆ ಸಹಾಯಕ ಇಂಜಿನಿಯರ್ ವರ್ಧಮಾನ ಹುದ್ದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲಕುಮಾರ ಮುದ್ದಾ ಅವರನ್ನು ಎಸಿಬಿ ಪೊಲೀಸರು ಈಗಾಗಲೇ ಬಂಧಿಸಿ ನಗರದ ಸಬ್ಜೈಲ್ನಲ್ಲಿ ಇರಿಸಿದ್ದಾರೆ. ಕಳೆದ ಬುಧವಾರ ಎಸಿಬಿ ಪೊಲೀಸರು ನಗರಸಭೆ ಮೇಲೆ ದಾಳಿ ನಡೆಸಿದ್ದು, ಅಲ್ಲಿಂದ ಆರಂಭವಾಗಿರುವ ವಿಚಾರಣೆ ಶುಕ್ರವಾರ ಸಂಜೆವರೆಗೂ ಮುಂದುವರಿಯಿತು.
ಪೌರಾಯುಕ್ತರ ಮೇಲೆ ಆರೋಪ:
ಇದೇ ಕಾಮಗಾರಿಯ ಬಿಲ್ ಪಾವತಿಗಾಗಿ ಸ್ವತಃ ನಗರಸಭೆ ಪೌರಾಯುಕ್ತ ರಮೇಶ ಜಾಧವ ಅವರ ಮೇಲೆ 1.5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದ್ದಲ್ಲದೆ, ಈ ಕುರಿತು ಎಸಿಬಿ ಪೊಲೀಸರು ವಿಚಾರಣೆಯನ್ನೂ ನಡೆಸಿರುವುದು ನಗರಸಭೆಯ ಲಂಚಾವತಾರಕ್ಕೆ ಸಾಕ್ಷಿಯಾಗಿದೆ.
ಆರು ತಿಂಗಳ ಕಾಯಬೇಕು: ಗದಗ ಬೆಟಗೇರಿ ನಗರಸಭೆಯಲ್ಲಿ ಮನೆ, ಕಟ್ಟಡ, ವಾಣಿಜ್ಯ ಮಳಿಗೆ ಮತ್ತಿತರ ಆಸ್ತಿ ನೋಂದಣಿ ಮಾಡಿಸಿ ಅದರ ಉತಾರ ಪಡೆಯವುದು ಸುಲಭ ಅಲ್ಲ. ಜನರು ತಮ್ಮ ಆಸ್ತಿಯನ್ನು ನಗರಸಭೆಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದರಿಂದ ಸಿಬ್ಬಂದಿ ಮತ್ತು ಅಧಿಕಾರಿಗಳು ಏಜೆಂಟರ ಮೂಲಕ ದುಡ್ಡು ಹೊಡೆಯುವ ದಂಧೆಯಲ್ಲಿ ಮುಳುಗಿದ್ದಾರೆ. ನಗರಸಭೆ ಕಂದಾಯ ವಿಭಾಗಕ್ಕೆ ನೇರವಾಗಿ ಅರ್ಜಿ ಸಲ್ಲಿಸಿ ಆಸ್ತಿ ಉತಾರಕ್ಕೆ ಕಾದು ಕುಳಿತರೆ ಅರ್ಜಿದಾರನಿಗೆ ಉತಾರ ಸಿಗಲು ಕನಿಷ್ಠ ಆರು ತಿಂಗಳಾದರೂ ಬೇಕು. ಹಣ ಕೊಡುವುದಿಲ್ಲ ಎಂಬುದು ಖಚಿತವಾದರೆ ಸಂಬಂಧಿಸಿದ ಅರ್ಜಿದಾರನ ಅರ್ಜಿಯನ್ನು ಹಳೆಯ ಕಡಿತಗಳಲ್ಲಿ ಸೇರಿಸಿ ನಿಮ್ಮ ಅರ್ಜಿ ಕಳೆದುಹೋಗಿದೆ ಅಥವಾ ಫೈಲ್ ಸಿಗುತ್ತಿಲ್ಲ ಎಂಬ ಸಬೂಬು ನೀಡಿ ಅಲೆದಾಡಿಸಲಾಗುತ್ತದೆ. ಇದರಿಂದ ಬೇಸತ್ತ ಅರ್ಜಿದಾರ ಅನಿವಾರ್ಯವಾಗಿ ಹಣ ನೀಡಿ ಉತಾರ ಪಡೆಯಬೇಕಾಗಿದೆ.
ಹೊಸ ಅರ್ಜಿದಾರರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಅವರ ಖಾತೆ ನಗರಸಭೆಯಲ್ಲಿ ದಾಖಲು ಇದ್ದರೆ 7 ದಿನಗಳೊಳಗೆ ಉತಾರ ನೀಡಬೇಕು. ನಗರಸಭೆಯಲ್ಲಿ ಆಸ್ತಿ ದಾಖಲು ಹಾಗೂ ವರ್ಗಾವಣೆ ಇದ್ದರೆ 45 ದಿನಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಉತಾರ ನೀಡಬೇಕು ಎಂಬ ಕಾನೂನು ಇದೆ. ಆದರೆ, ಹಣ ಕೊಟ್ಟರೆ ಮಾತ್ರ ಇಲ್ಲಿ ಬೇಗನೆ ಕೆಲಸ ಆಗುತ್ತದೆ. ಹಣ ಕೊಡದಿದ್ದರೆ ಆರು ತಿಂಗಳಿಂದ ವರ್ಷದವರೆಗೆ ಕಾಯಬೇಕಾದ ಸ್ಥಿತಿ ಇದೆ ಎಂದು ಜನ ಅಳಲು ತೋಡಿಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ಪೀಡಿತರಿಂದಲೂ ಲಂಚ ಸ್ವೀಕರಿಸುವಂತಹ ಅಮಾನವೀಯ ಕೃತ್ಯ ನಡೆಯುತ್ತಿರುವುದರಿಂದ ನಗರಸಭೆ ಆಡಳಿತ ವ್ಯವಸ್ಥೆಗೆ ಅವಳಿ ನಗರದ ಜನರು ರೋಸಿ ಹೋಗಿದ್ದಾರೆ.
ಬಹುಮಹಡಿ ಕಟ್ಟಡಕ್ಕೆ ನೋಟಿಸ್! ನಗರದ ಪಾಳಾ-ಬಾದಾಮಿ ರಸ್ತೆಯ ಪಕ್ಕದಲ್ಲಿ ನಿರ್ವಣಗೊಂಡಿರುವ ಬಹುಮಹಡಿ ಕಟ್ಟಡ ಕಾರ್ಯದಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಈ ಕುರಿತು ಕೂಡಲೆ ಉತ್ತರಿಸಬೇಕು ಎಂದು ನಗರಸಭೆ ನೋಟಿಸ್ ನೀಡಿ ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕರೊನಾ ಹಾವಳಿ ಹೆಚ್ಚಾಗಿದ್ದರಿಂದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪೌರಾಯುಕ್ತರು ಹೇಳುತ್ತಾರೆ. ಇದಲ್ಲದೆ, ಮಾನ್ವಿ ಹಳ್ಳವನ್ನು ಪ್ರಭಾವಿಗಳೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ, ಈ ಕುರಿತು ನಗರಸಭೆ ವತಿಯಿಂದ ಡ್ರೋನ್ ಕ್ಯಾಮರಾ ಮೂಲಕ ಸರ್ವೆ ಮಾಡಿಸಲಾಗಿದೆ. ಈ ಸರ್ವೆ ವರದಿ ಕುರಿತು ನಗರಸಭೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಈ ವಿಷಯದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನ ಜನರಲ್ಲಿ ಶುರುವಾಗಿದೆ.
ಕಟ್ಟಡ ಪರವಾನಗಿಗೆ ಕಾಂಚಾಣ ಕುಣಿತ: ನಗರಸಭೆಯಲ್ಲಿ ಕಟ್ಟಡ ಪರವಾನಗಿ ನೀಡಲು ದೊಡ್ಡ ಗೋಲ್‍ಮಾಲ್ ನಡೆಯುತ್ತಿದೆ. ಕಟ್ಟಡ ಪರವಾನಗಿಗೆ 3 ಸಾವಿರ ರೂ. ಎನ್ಒಸಿಗೆ 1 ಸಾವಿರ ರೂ., ಫಾಮ್ರ್ ನಂ 3ಕ್ಕೆ ನಿವೇಶನಕ್ಕೆ ತಕ್ಕಂತೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಹಣ ನೀಡಿದರೆ ಕಾನೂನು ಉಲ್ಲಂಘಿಸಿ ಸಹ ಕಟ್ಟಡ ಪರವಾನಗಿ ಹಾಗೂ ಇತರ ಪ್ರಮಾಣಪತ್ರಗಳನ್ನು ನೀಡಿದ ಉದಾಹರಣೆಗಳೂ ಇವೆ ಎಂದು ಜನ ಆರೋಪಿಸುತ್ತಿದ್ದಾರೆ. ನಗರಸಭೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಿರಿಯ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕರು, ಕರ ವಸೂಲಿಗಾರರು ಕಾರ್ಯನಿರ್ವಹಿಸುತ್ತಿದ್ದು, ಅವಳಿ ನಗರದ ನಾಡಿಮಿಡಿತವನ್ನು ಸಂಪೂರ್ಣವಾಗಿ ಬಲ್ಲವರಾಗಿದ್ದಾರೆ. ಇವರಿಂದಲೇ ನಗರಸಭೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಆರೋಪವೂ ಇದೆ.
ಬಂಧನ ಭೀತಿ: ಲಂಚ ಪ್ರಕರಣದಲ್ಲಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ಅವರ ವಿಚಾರಣೆ ನಡೆಸಿದ್ದರಿಂದ ಸಹಜವಾಗಿ ಅವಳಿ ನಗರದಲ್ಲಿ ಕುತೂಹಲ ಮೂಡಿದೆ. 1.50 ಲಕ್ಷ ರೂ, ಲಂಚಕ್ಕೆ ಬೇಡಿಕೆ ಇಟ್ಟಿರುವ ಪೌರಾಯುಕ್ತರ ಬಂಧನ ಆಗಬಹುದೇ ಎಂಬ ಚರ್ಚೆ ವ್ಯಾಪಕವಾಗಿದೆ. ಲಂಚ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವಳಿ ನಗರದ ಜನರು ಆಗ್ರಹಿಸುತ್ತಿದ್ದಾರೆ.