ಜಿಲ್ಲೆ

ಗದಗ ಗಂಜಿ ಬಸವೇಶ್ವರ ವೃತ್ತದ ವ್ಯಕ್ತಿ ಬಿಡುಗಡೆ

ಗದಗ: ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ಕೋವಿಡ್-19 ಸೋಂಕಿತ ವ್ಯಕ್ತಿ (ಪಿ-912)ಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಬಿಡುಗಡೆಯಾದ ವ್ಯಕ್ತಿ ನಗರದ ಗಂಜಿ ಬಸವೇಶ್ವರ ವೃತ್ತದ ನಿವಾಸಿ, 61 ವರ್ಷದ ಪುರುಷ (ಪಿ-912). ಇವರಿಗೆ ಪಿ-514ರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿತ್ತು. ಇವರನ್ನು ಏ. 30ರಂದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್್ಸ) ಪ್ರಯೋಗಾಲಯದಲ್ಲಿ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಸೋಂಕಿರುವುದು ದೃಢಪಟ್ಟಿತ್ತು.

15 ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಇವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು. ಇವರ ಗಂಟಲ ದ್ರವವನ್ನು ಮತ್ತೆರಡು ಸಲ ಮೇ 14, 15ರಂದು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯಕೀಯ ವರದಿ ನೆಗೆಟಿವ್ ಬಂತು. ಈ ಹಿನ್ನೆಲೆಯಲ್ಲಿ ಶನಿವಾರ ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇವರನ್ನು ಮುಂದಿನ 14 ದಿನಗಳ ಕಾಲ ಅವರನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತಿದೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದರು.

ಕರೊನಾದಿಂದ ಗುಣಮುಖನಾದ ವ್ಯಕ್ತಿಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಗೌರವಿಸುವ ಮೂಲಕ ಬೀಳ್ಕೊಟ್ಟರು. ಅಲ್ಲದೇ, ರೇಷನ್ ಕಿಟ್, ಮಾಸ್ಕ್ ನೀಡಿ ಆಂಬುಲೆನ್ಸ್ ಮೂಲಕ ಅವರ ಮನೆಗೆ ಕಳುಹಿಸಿಕೊಡಲಾಯಿತು.

ಜಿಮ್್ಸ ವೈದ್ಯರಾದ ಡಾ. ಕೊಟ್ರೇಶ, ಡಾ. ಆರ್.ಟಿ. ಪಾಟೀಲ, ವೈದ್ಯಕೀಯ ಸಿಬ್ಬಂದಿ ಇದ್ದರು.

ಜಿಲ್ಲೆಯಲ್ಲಿ 149 ವರದಿ ಬಾಕಿ

ಗದಗ: ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶನಿವಾರ 168 ಜನರು ಸೇರಿ ಇದುವರೆಗೆ 3136 ಜನರನ್ನು ನಿಗಾದಲ್ಲಿ ಇರಿಸಲಾಗಿದೆ. 177 ಜನರು ಸೇರಿ 3306 ಜನರ ಗಂಟಲ, ಮೂಗಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

547 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದು, 2572 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. 16 ಜನರನ್ನು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 85 ವರದಿಗಳು ತಿರಸ್ಕೃತಗೊಂಡಿವೆ. ಹೊಸದಾಗಿ 142 ಸೇರಿ 149 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಪಿ-166 , ಪಿ-304, ಪಿ-370, ಪಿ-396, ಪಿ-514, ಪಿ-905, ಪಿ-912, ಪಿ-913, ಪಿ-970, ಪಿ-971, ಪಿ-972, ಪಿ-973 ಸೇರಿ 12 ಕರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು. ಶನಿವಾರ ಬಿಡುಗಡೆಯಾದ ವ್ಯಕ್ತಿ (ಪಿ-912) ಸೇರಿ ಐವರು (ಪಿ-304, ಪಿ-370, ಪಿ-396, ಪಿ-514) ಬಿಡುಗಡೆಯಾಗಿದ್ದಾರೆ. ಒಬ್ಬ ವೃದ್ಧೆ (ಪಿ-166) ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಇನ್ನುಳಿದ 6 ಜನರಿಗೆ ಜಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.