ಪ್ರಸಕ್ತ ಸಾಲಿನ ಕಪ್ಪತಗುಡ್ಡ ಉತ್ಸವ ಡಿ.9 ರಂದು ಡೋಣಿ ಗ್ರಾಮದ ನಂದಿವೇರಿ ಮಠದ ಆವರಣದಲ್ಲಿ ಜರುಗಲಿದೆ ಎಂದು ನಂದಿವೇರಿ ಕುಮಾರಸ್ವಾಮಿ ಶ್ರೀಗಳು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಜಿಲ್ಲೆಯ 70 ಗ್ರಾಮಗಳಿಗೆ ತೆರಳಿ ಕಪ್ಪತಗುಡ್ಡ, ಔಷಧೀಯ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಪರಿಸರದ ವರ್ಧನೆ,ಸಂವರ್ಧನೆ, ಜಲ ರಕ್ಷಣೆ-ಸಂರಕ್ಷಣೆ, ಔಷಧೀಯ ಸಸ್ಯಗಳ ಪಾಲನೆ, ಪೋಷಣೆ, ಗೋ ಹಾಗೂ ನಂದಿ ಆಧಾರಿತ ಕೃಷಿ, ಪಾರಂಪರಿಕ ಕೃಷಿ, ನೈಸರ್ಗಿಕ ಕೃಷಿ, ಸಾವಯವ ಕೃಷಿ, ಮರ ಆಧಾರಿತ ಕೃಷಿಯೆಡೆಗೆ ರೈತರನ್ನು ಹಾಗೂ ಯುವಕರನ್ನು ಆಕರ್ಷಿಸುವುದೇ ಕಪ್ಪತ್ತಗುಡ್ಡ ಉತ್ಸವದ ಮೂಲ ಗುರಿಯಾಗಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ, ಜಲ ಸಂರಕ್ಷಣೆ ಮತ್ತು ಭೂಸಾರ ಸಂರಕ್ಷಣೆ ದೇಶಿ ಬೀಜಗಳನ್ನು ಉಪಯೋಗಿಸಲು ಪ್ರೇರೇಪಿಸುವುದರೊಂದಿಗೆ ರಾಸಾಯನಿಕ ಮುಕ್ತ ಹಾಗೂ ಸ್ವಾವಲಂಬಿ ಸುಸ್ಥಿರ ಕೃಷಿಯೆಡೆಗೆ ಸಾಮೂಹಿಕ ಯತ್ನದೊಂದಿಗೆ ರೈತರಿಂದಲೇ ಉದ್ಭವಗೊಳ್ಳುತ್ತಿರುವ ಅಭಿಯಾನ ಇದಾಗಿದೆಯೆಂದು ಶ್ರೀಗಳು ಹೇಳಿದರು.
ಕೊಲ್ಲಾಪುರದ ಕಣೇರಿವಾಡಿಯ ಸಿದ್ದಗಿರಿ ಸಂಸ್ಥಾನಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಉತ್ಸವದ ಉದ್ಘಾಟನೆ ಮಾಡುವರು. ಮಾಜಿ ಸಚಿವ ಎಸ್. ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ದೆಹಲಿಯ ಸಸ್ಯ ಸಂರಕ್ಷಣಾ ಮತ್ತು ರೈತರ ಹಕ್ಕುಗಳ ಹೋರಾಟ ಆಯೋಗದ ಮಾಜಿ ಅಧ್ಯಕ್ಷರೂ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಆರ್.ಆರ್. ಹಂಚಿನಾಳ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಎಲ್. ಪಾಟೀಲ, ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಶೋಕ ಆಲೂರು, ಸಾವಯವ ಕೃಷಿಕ ಗುರುನಾಥ ಓದುಗೌಡ್ರ, ನೈಸರ್ಗಿಕ ಕೃಷಿಕ ದೇವೇಂದ್ರಪ್ಪ ಬಳೂಟಗಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ, ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಎಂ ಎಂ. ಅಪ್ಪಣ್ಣವರ ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀಗಳು ಹೇಳಿದರು.
ಉತ್ಸವ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಮಾತನಾಡಿ, ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಕ್ರಷರ್ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ವಿರೋಧಿಸಿ ಉತ್ಸವದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಲಹಾ ಸಮಿತಿ ಅಧ್ಯಕ್ಷ ಗುರುನಾಥ ಓದುಗೌಡ್ರು, ಉತ್ಸವದ ಪ್ರಧಾನ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ, ಶಿವಣ್ಣ ಅರಹುಣಸಿ, ಬಿ.ಟಿ.ಸೋಮರಡ್ಡಿ, ಸಿದ್ದಣ್ಣ ನಂಜಪ್ಪನವರ ಇದ್ದರು.