ಜಿಲ್ಲೆ

ಗಣೇಶೋತ್ಸವದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು : ಎಸ್‌.ಪಿ ಹರಿರಾಮ್ ಶಂಕರ್

reportermys

ಅರಸೀಕೆರೆ: ದಶಕಗಳ ಇತಿಹಾಸ ಹೊಂದಿರುವ ತಾಲೂಕಿನ ಗಣೇಶೋತ್ಸವದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮನವಿ ಮಾಡಿದರು.

ನಗರಠಾಣೆ ಆವರಣದಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಉತ್ಸವ,ಹಬ್ಬಗಳು ಸಂಭ್ರಮಕ್ಕೆ ಪೂರಕವಾಗಬೇಕರೆ ವಿನಹಃ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು. ಇಲಾಖೆ ಮಾರ್ಗಸೂಚಿ ಅನುಸಾರ ನಿಗದಿತ ರಸ್ತೆಗಳಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಣಪತಿ ಮಂಡಳಿ ಪದಾಧಿಕಾರಿಗಳು ಸ್ವಯಂ ಸೇವಕರನ್ನು ನಿಯೋಜಿಸಿ ನಮ್ಮೊಂದಿಗೆ ಕೈಜೋಡಿಸಬೇಕು. ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್‌ಗಳನ್ನು ನಿಷೇಧಿಸಲಾಗಿದೆ.ಡಿಜೆ ಸೌಂಡ್ಸ್ ಬಳಕೆಗೆ ಇಲಾಖೆ ಅಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅತ್ಯುತ್ಸಾದ ಅಮಲಿನಲ್ಲಿ ಶಾಂತಿ ಕದಡಲು ಯತ್ನಿಸಿದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ನಗರಸಭೆ ಅಧ್ಯಕ್ಷ ಸಿಗಿರೀಶ್ ಮಾತನಾಡಿ, 81ನೇ ವರ್ಷದ ಗಣೇಶೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ನಾವು ಬದ್ಧರಿದ್ದೇವೆ.ಅ.28ರಂದು ಶುಕ್ರವಾರ ಸಂಜೆ ವಾಚನಾಲಯ ರಸ್ತೆಯಲ್ಲಿ ಗಣೇಶೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.ಅ.29ರಂದು ನಗರದ ಹಲವು ಬೀದಿಗಳಲ್ಲಿ ಸಂಚರಿಸಿ ಸಂಜೆ ಕಂತೇನಹಳ್ಳಿ ಗ್ರಾಮ ಪ್ರವೇಶಿಸಲಿದೆ.ಬರೋಬ್ಬರಿ ಒಂದೂವರೆ ದಶಕದ ಬಳಿಕ ಕೆರೆ ತುಂಬಿರುವ ಹಿನ್ನಲೆಯಲ್ಲಿ ಅ.30ರಂದು ಬೆಳಗ್ಗೆ ತೆಪ್ಪೋತ್ಸವ ನಡೆಸಿದ ಬಳಿಕ ವಿಸರ್ಜನಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದರು.

ತಹಸೀಲ್ದಾರ್ ವಿಭಾ ವಿ ರಾಥೋಡ್ ಮಾತನಾಡಿ, ಕೆರೆ ಏರಿ ಅಂಚಿನಲ್ಲಿ ಬೆಳದಿರುವ ಗಿಡಗಂಟಿಗಳ ತೆರವಿಗೆ ಸಣ್ಣ ನಿರಾವರಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು.ಅದ್ದೂರಿ ಗಣೇಶೋತ್ಸವಕ್ಕೆ ತಾಲೂಕಿನ ಜನತೆ ಸಹಕರಿಸಬೇಕು ಎಂದರು.ಶಾಸಕ ಕೆ.ಎಂ.ಶಿವಲಿಂಗೇಗೌಡ ಮೆರವಣಿಗೆ ರೂಪುರೇಷೆ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.ನಗರ ಠಾಣೆ ಇನ್ಸ್‌ಪೆಕ್ಟರ್ ಸೋಮೇಗೌಡ ರೂಟ್‌ಮ್ಯಾಪ್ ಕುರಿತು ವಿವರ ನೀಡಿದರು.ಡಿವೈಎಸ್‌ಪಿ ಅಶೋಕ್, ಗ್ರಾಮಾಂತರ ಠಾಣೆ ಸಿಪಿಐ ರಾಘವೇಂದ್ರ ಪ್ರಕಾಶ್, ಜಮಾತ್ ಸಮಿತಿ ಒಳಗೊಂಡಂತೆ ನಾಗರಿಕರು ಅಗತ್ಯ ಸಲಹೆ ಸೂಚನೆ ನೀಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ವಿಭಾ ವಿರಾಥೋಡ್, ಸಿ.ಗಿರೀಶ್,ಅಶೋಕ್ ಇತರರಿದ್ದಾರೆ.