ಜಿಲ್ಲೆ

ಗಣೇಶೋತ್ಸವಕ್ಕೆ ಚಿಕ್ಕೋಡಿ ಪಟ್ಟಣ ಸಜ್ಜು

ಗಣೇಶೋತ್ಸವಕ್ಕೆ ಚಿಕ್ಕೋಡಿ ಪಟ್ಟಣ ಸಜ್ಜು

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಗೌರಿ-ಗಣೇಶ ಹಬ್ಬಕ್ಕೆ ಗಡಿ ಭಾಗದ ಚಿಕ್ಕೋಡಿ ಪಟ್ಟಣ ಸಜ್ಜುಗೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯು ಅದ್ದೂರಿ ಗಣೇಶೋತ್ಸವಕ್ಕೆ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದು, ಪಟ್ಟಣದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ವಿರಳವಾಗಿದ್ದು, ಮಾರುಕಟ್ಟೆಗೆ ಪಿಒಪಿ ಗಣೇಶ ಮೂರ್ತಿಗಳ ಅಬ್ಬರ ಜೋರಾಗಿದ್ದು, ಹಲವು ನಿಯಮಗಳ ನಡುವೇಯು ಗಣಪನ ಆಗಮನಕ್ಕೆ ಪಟ್ಟಣದಲ್ಲಿ ಉತ್ಸವದ ಉತ್ಸಾಹ ಹೆಚ್ಚಾಗಿದೆ.

ಗಣೇಶ ಉತ್ಸವಕ್ಕಿದೆ 111 ವರ್ಷದ ಇತಿಹಾಸ

ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಗಣೇಶ ಉತ್ಸವಕ್ಕೆ ಬರೋಬರಿ 111 ವರ್ಷದ ಇತಿಹಾಸವಿದೆ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟಿಷರ ವಿರುದ್ದ ಜನರನ್ನು ಒಗ್ಗೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಕರೆ ನೀಡಿದ್ದ ಸಾರ್ವಜನಿಕ ಗಣೇಶ ಉತ್ಸವ ಆಚರಣೆ ಪ್ರಭಾವದಿಂದ 1914ರಲ್ಲಿ ಚಿಕ್ಕೋಡಿ ಪಟ್ಟಣದ ಗುರುವಾರ ಪೇಟೆಯಲ್ಲಿ ಘೋರ್ಪಡೆ ಮತ್ತು ಭೋಸಲೆ ಕುಟುಂಬಸ್ಥರು ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಇದು ಪಟ್ಟಣದ ಮೊದಲ ಸಾರ್ವಜನಿಕ ಗಣೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಿನಿಂದ ಕುಮಾರ ಗಜಾನನ ಮಂಡಳಿ ಎಂಬ ಹೆಸರಿನಿಂದ ಪರಂಪರೆ ಮುಂದುವರೆದಿದ್ದು, ಪ್ರಸ್ತುತ 50 ಕ್ಕೂ ಅಧಿಕ ಸ್ಥಳಗಳಲ್ಲಿ ವಿನಾಯಕನನ್ನು ಪೂಜಿಸಲಾಗುತ್ತಿದೆ.