ಚಾಮರಾಜನಗರ: ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂಬಂಧ ಗಣೇಶೋತ್ಸವ ಆಯೋಜಕರಿಗೆ ಪರವಾನಗಿ ನೀಡುವ ಸಲುವಾಗಿ ತಾಲೂಕು ಮಟ್ಟದಲ್ಲಿ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಹ ಗೌರಿ-ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಬಾರಿ ಸರ್ಕಾರದ ಕೆಲ ಷರತ್ತು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಿ ಹಬ್ಬ ಆಚರಿಸಬೇಕಾಗಿದೆ. ಗಣೇಶೋತ್ಸವ ಆಚರಣೆಗಾಗಿ ಉತ್ಸವ ಆಯೋಜಕರಿಗೆ ಅನುಮತಿ ನೀಡಬೇಕಿದೆ. ಈ ಕಾರ್ಯವನ್ನು ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಆಯಾ ತಾಲೂಕಿನ ತಹಸೀಲ್ದಾರ್ ನೇತೃತ್ವದ
ಲ್ಲಿ ಏಕಗವಾಕ್ಷಿ ಯೋಜನೆಯಡಿ ಪರವಾನಗಿ ನೀಡಲು ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಮಿತಿಯಲ್ಲಿ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ತಾ.ಪಂ. ಇಒ, ಪೊಲೀಸ್ ವೃತ್ತ ನಿರೀಕ್ಷಕರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ತಾಲೂಕು ಅಗ್ನಿಶಾಮಕ ಠಾಣಾಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸಮಿತಿ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಸ್ವೀಕೃತವಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಗಣೇಶೋತ್ಸವಕ್ಕೆ ಪರವಾನಗಿ: ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್ ಮಟ್ಟದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ಏಕಗವಾಕ್ಷಿ ವ್ಯವಸ್ಥೆ ರಚಿಸಬೇಕು. ಆಯೋಜಕರು ನಿಗದಿತ ನಮೂನೆಯಲ್ಲಿ ಉತ್ಸವಕ್ಕೆ ಮುನ್ನ ಆಯಾ ಏಕಗವಾಕ್ಷಿ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಸಮಿತಿಗೆ ಸ್ವೀಕೃತವಾಗುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ ನಿಯಮಾನುಸಾರ ಪರಿಶೀಲಿಸಿ ಮೂರು ದಿನದೊಳಗೆ ಪರವಾನಗಿ ನೀಡಲಿದ್ದಾರೆ ಎಂದರು.
ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಪಟ್ಟಣ ಪೊಲೀಸ್ ಠಾಣಾಧಿಕಾರಿ ತಿಮ್ಮರಾಜು, ಗಣೇಶ ಪ್ರತಿಷ್ಠಾಪನೆ ಮಂಡಳಿಯ ಅಧ್ಯಕ್ಷ ಮನೋಜ್ ಪಟೇಲ್ ಇತರರು ಸಭೆಯಲ್ಲಿದ್ದರು.
ಸಿಸಿ ಕ್ಯಾಮರಾ ಅಳವಡಿಸಿ: ಪರಿಸರ ಮಾಲಿನ್ಯ ಉಂಟಾಗದಂತೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಬಗ್ಗೆ ಆಯೋಜಕರಿಂದ ಖಾತ್ರಿಪಡಿಸಿಕೊಳ್ಳಬೇಕು. ಅವಶ್ಯವಿರುವ ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಆಯೋಜಕರು ಎಚ್ಚರ ವಹಿಸಬೇಕು. ಹೈಟೆನ್ಸನ್ ವಿದ್ಯುತ್ ತಂತಿ ಹಾದುಹೋಗಿರುವ ಪ್ರದೇಶದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ. ಸಂಭ್ರಮ, ಸಡಗರದಿಂದ ಆಚರಿಸಲಾಗುವ ಗಣೇಶೋತ್ಸವ ಹಬ್ಬವನ್ನು ಶಾಂತಿ, ಸೌಹಾರ್ದತೆ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದು ಡಿಸಿ ಚಾರುಲತಾ ಸೋಮಲ್ ಮನವಿ ಮಾಡಿದರು.