ಜಿಲ್ಲೆ

ಗಣೇಶೋತ್ಸವ-ಈದ್ ಮಿಲಾದ್ ಖುಷಿಯಿಂದ ಆಚರಿಸಿ

ಹಗರಿಬೊಮ್ಮನಹಳ್ಳಿ: ಎಲ್ಲ ಸಮುದಾಯಗಳು ಸೌಹಾರ್ದದಿಂದ ನಡೆದುಕೊಳ್ಳಬೇಕು. ಪ್ರತಿಯೊಬ್ಬರೂ ಖುಷಿಯಾಗಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಿಸಬೇಕೆಂದು ವಿಜಯನಗರ ಜಿಲ್ಲಾ ಹೆಚ್ಚುವರಿ ಎಸ್ಪಿ ಮಂಜುನಾಥ ತಿಳಿಸಿದರು.

ಪಟ್ಟಣದ ಠಾಣೆಯಲ್ಲಿ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ಆಚರಣೆಗಳು ಶಾಂತಿಯುತವಾಗಿ ನಡೆದರೆ, ಸಮಾಜ ಕಲುಷಿತಗೊಳ್ಳುವುದಿಲ್ಲ. ಕೆಲ ಕಿಡಿಗೇಡಿಗಳು ಇಂತಹ ಅವಕಾಶವನ್ನು ಬಳಸಿಕೊಂಡು ಶಾಂತಿಯಿಂದ ಕೂಡಿರುವ ಸಮಾಜವನ್ನು ಕಲುಷಿತ ಮಾಡುತ್ತಾರೆ ಎಂದರು.

ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾತನಾಡಿ, ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ. ಕಾರ್ಯಕ್ರಮಗಳನ್ನು ರಾತ್ರಿ 10ಗಂಟೆಯೊಳಗೆ ಮುಕ್ತಾಯ ಮಾಡಿ. ಗಲಾಟೆಗಳಿಗೆ ಅವಕಾಶ ಮಾಡಿಕೊಡದೆ ಸ್ನೇಹಿತರಾಗಿ ಬಾಳಬೇಕು ಎಂದರು.

ಪುರಸಭೆ ಅಧ್ಯಕ್ಷ ಮರಿರಾಮಣ್ಣ ಮಾತನಾಡಿ, ಗಣೇಶ ಚತುರ್ಥಿ ಎಲ್ಲ ಸಮುದಾಯಗಳು ಸೇರಿ ಆಚರಿಸುವ ಹಬ್ಬವಾಗಿದೆ. ಸೌಹಾರ್ದ ಎಲ್ಲಿ ಇರುತ್ತೋ ಅಲ್ಲಿ ಶಾಂತಿ ನೆಲೆಸಿರುತ್ತದೆ. ಎರಡೂ ಹಬ್ಬಗಳನ್ನು ಸಡಗರದಿಂದ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದರು.

ಸಿಪಿಐ ವಿಕಾಸ ಲಮಾಣಿ ಮಾತನಾಡಿ, ಸಂಘ-ಸಂಸ್ಥೆಯವರು ಗಣೇಶ ಪ್ರತಿಷ್ಠಾಪನೆಗೆ ಪರವಾನಗಿ ಪಡೆಯುವವರು ಪೊಲೀಸ್ ಠಾಣೆ, ಪುರಸಭೆ, ಜೆಸ್ಕಾಂ ಪರವಾನಗಿ ಕಡ್ಡಾಯವಾಗಿ ಪಡೆಯಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ಇಲಾಖೆಯ ಕಣ್ಗಾವಲು ಇರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸೇರಿದ್ದ ಬಹುತೇಕರು ಡಿಜೆಗೆ ಪರವಾನಿಗೆ ನೀಡಬೇಕು. ರಾತ್ರಿ 11 ಗಂಟೆವರೆಗೂ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಮನವಿಮಾಡಿದರು. ಕಾನೂನಿನ ಬದಲಾವಣೆ ಮಾಡಲಾಗದು. ಸಂಘ-ಸಂಸ್ಥೆಯವರು ಸಹಕರಿಸಿ ಎಂದರು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಸದಸ್ಯರಾದ ಅಜೀಜುಲ್ಲಾ, ದೀಪಕ್ ಸಾ ಕಠಾರಿ, ಜೋಗಿ ಹನುಮಂತಪ್ಪ, ಮಾಜಿ ಸದಸ್ಯ ಸೆರೆಗಾರ ಹುಚ್ಚಪ್ಪ, ಮುಖ್ಯಾಧಿಕಾರಿ ಕೆ.ಎಂ.ಮುಗಳಿ, ಉಪತಹಸೀಲ್ದಾರ್ ಶಿವಕುಮಾರಗೌಡ, ತಾ.ಪಂ.ಇಒ ಡಿ.ಲಕ್ಷ್ಮೀಕಾಂತ, ಆರೋಗ್ಯಾಧಿಕಾರಿ ಪ್ರವೀಣ್ ಕುಮಾರ, ಜೆಸ್ಕಾಂ ಅಧಿಕಾರಿ ಸತೀಶ್, ಪ್ರಮುಖರಾದ ಕನ್ನಿಹಳ್ಳಿ ಚಂದ್ರಶೇಖರ್, ಬಿಜೆಪಿ ಮಂಡಲ ಅಧ್ಯಕ್ಷ ಬೆಣ್ಣೆಕಲು ಪ್ರಕಾಶ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರು ಬಸವರಾಜ ಸೊನ್ನದ್, ಹುಡುಚಪ್ಪ, ರಹಿಮಾನ್ ಕುಲ್ಮಿ, ಕರವೇ ತಾಲೂಕು ಅಧ್ಯಕ್ಷರಾದ ಎನ್.ಎಂ.ಗೌಸ್, ಭರಮಪ್ಪ, ವಕೀಲ ಚಂದ್ರು, ಡಿಶ್ ಮಂಜುನಾಥ, ಪೋಟೋ ರಾಮಣ್ಣ, ದಾದಾಪೀರ್, ಪುಜಾರ್ ಸಂತೋಷ, ಪೇದೆಗಳಾದ ದಶರಥ, ಮಲ್ಲೇಶನಾಯ್ಕ ಮತ್ತಿತರರು ಇದ್ದರು.