ಜಿಲ್ಲೆ

ಗಣೇಶೋತ್ಸವಕ್ಕೆ ಅನುಮತಿ, ವಿಜಯೋತ್ಸವ

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಇಲ್ಲಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಗಣೇಶ ವಿಗ್ರಹ ತಯಾರಕರು, ಡೆಕೊರೇಟರ್ಸ್, ಮುಂತಾದವರು ಜಯಘೋಷ ಮೊಳಗಿಸಿದರು.

ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಸೋಮವಾರ ಶ್ರೀರಾಮ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಗಣೇಶೋತ್ಸವ ದೊಡ್ಡ ಹಬ್ಬ. ಡೆಕೊರೇಟರ್ಸ್, ಮೂರ್ತಿ ತಯಾರಕರು ಮುಂತಾದವರು ಉತ್ಸವಕ್ಕೆ ಅನುಮತಿ ಇಲ್ಲದಿದ್ದರೆ ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ ಶೀಘ್ರ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿತ್ತು.

ರಾಜ್ಯ ಸರ್ಕಾರ ಇದೀಗ ಕೆಲ ಷರತ್ತಿನೊಂದಿಗೆ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ಇದಕ್ಕಾಗಿ ಶ್ರೀರಾಮ ಸೇನೆ ಆಶ್ರಯದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಸಿಹಿ ಹಂಚಿ ಸಂಭ್ರಮಿಸಲಾಯಿತು.

ಏಕ ಗವಾಕ್ಷಿ ಕೇಂದ್ರದ ಮೂಲಕ ಅನುಮತಿ

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಗಣೇಶೋತ್ಸವ ಮಂಡಳಿಗಳಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸ್ವೀಕರಿಸಿ ಪೊಲೀಸ್ ಇಲಾಖೆ, ಹೆಸ್ಕಾಂ ಸಹಯೋಗದಲ್ಲಿ ಸುಲಭವಾಗಿ ಅನುಮತಿ ಪಡೆಯಲು ಹುಬ್ಬಳ್ಳಿ ಹಾಗೂ ಧಾರವಾಡ ವಿಭಾಗದ ಪಾಲಿಕೆಯ ಕೇಂದ್ರ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದಿ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದ್ದಾರೆ.