ಸೊರಬ: ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜತೆಗೆ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಹಬ್ಬಗಳನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಹಬ್ಬಗಳನ್ನು ಆಚರಿಸಿದರೆ ಪೊಲೀಸ್ ಇಲಾಖೆಯು ಸಹ ಸಹಕಾರ ನೀಡಲಿದೆ ಎಂದು ಸಿಪಿಐ ಎಲ್.ರಾಜಶೇಖರ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಗಣೇಶೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿ, ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಡಿಜೆಗೆ ಅವಕಾಶವಿರುವುದಿಲ್ಲ. ವಿಸರ್ಜನಾ ಮೆರವಣಿಗೆಯನ್ನು ನಿಗದಿಪಡಿಸಿದ ಮಾರ್ಗದಲ್ಲಿಯೇ ನಡೆಸುವುದು. ಕೊನೆಯ ಕ್ಷಣದಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂದು ಸೂಚಿಸಿದರು.
ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ 2 ಸೌಂಡ್ ಬಾಕ್ಸ್‌ಗಳಿಗೆ ಅವಕಾಶವಿದೆ. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ವೇಳೆ ಸಂಘಟಕರು ಸಾಧ್ಯವಾದಷ್ಟು ಸಿಸಿ ಕ್ಯಾಮೆರಾ ಅಳವಡಿಸಿರೆ ಸೂಕ್ತ. ಜತೆಗೆ ಸಂಘಟಕರು ಗಣೇಶ ಮೂರ್ತಿಯನ್ನು ಕಾಯಲು ಸ್ವಯಂ ಸೇವಕನ್ನು ನೇಮಕ ಮಾಡಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಹುಸೇನ್ ಸರಕಾವಸ್ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಾಲೂಕು ಆಡಳಿತದಿಂದ ಸಹಕಾರ ನೀಡಲಾಗುವುದು. ಸಂಘಟಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾಲೂಕು ಕಚೇರಿ ಆವರಣದಲ್ಲಿ ಪರವಾನಗಿ ಪಡೆಯಲು ಏಕಗವಾಕ್ಷಿ ಪದ್ಧತಿ ಜಾರಿಗೆ ತರಲಾಗಿದೆ ಎಂದರು.
ಪಿಎಸ್‌ಐ ನಾಗರಾಜ್, ಮೆಸ್ಕಾಂ ಶಾಖಾಧಿಕಾರಿ ಉಮೇಶ್, ಪುರಸಭೆ ಪರಿಸರ ಅಭಿಯಂತರ ಚಂದನ್, ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ, ಶ್ರೀ ಭೂತೇಶ್ವರ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಜಿ.ಕೆರಿಯಪ್ಪ, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಶಾಂತ್ ಮೇಸ್ತ್ರಿ, ರಾಮಪ್ಪ ಸಣ್ಣಬೈಲ್, ಮಹೇಶ್ ಖಾರ್ವಿ, ಪ್ರಭಾಕರ್, ಶಿವಪ್ಪ ಯಡಗೊಪ್ಪ ಇತರರಿದ್ದರು.