ಚಿತ್ರದುರ್ಗ: ಗಣೇಶ ಚತುರ್ಥಿ ಪ್ರಯುಕ್ತ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ವಿಸರ್ಜಿಸಲು ಆ.27ರಂದು ಚಿತ್ರದುರ್ಗ ನಗರಸಭೆ ನಗರದ ವಿವಿಧೆಡೆ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಿದೆ. ಪಿಒಪಿ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕ ಯುಕ್ತ ಬಣ್ಣದಿಂದ ಅಲಂಕೃತಗೊಂಡ ಗಣೇಶ ಮೂರ್ತಿಗಳನ್ನು ಪ್ರತಿಷಾಪನೆ ನಿಷೇಧಿಸಲಾಗಿದೆ. ಮಣ್ಣಿನ, ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಗಣೇಶ ಮೂರ್ತಿಗಳನ್ನು ನೈಸರ್ಗಿಕ ನೀರಿನ ಮೂಲಗಳಾದ ಹೊಂಡ, ಕೆರೆ, ಭಾವಿಗಳಲ್ಲಿ ವಿಸರ್ಜಿಸಬಾರದು, ಇದಕ್ಕಾಗಿ ತಾತ್ಕಾಲಿಕ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ನಗರದ ಸ್ಟೇಡಿಯಂ ರಸ್ತೆ, ವೀರ ವನಿತೆ ಒನಕೆ ಓಬವ್ವ ಸ್ಟೇಡಿಯಂ ಸಮೀಪ, ಐಯುಡಿಪಿ ಬಡಾವಣೆ ರಾಜ್‌ಕುಮಾರ್ ಪಾರ್ಕ್ ಹತ್ತಿರ, ಕೋಟೆ ರಸ್ತೆ ಏಕನಾಥೇಶ್ವರಿ ಪಾದ ಗುಡಿ ಮುಂಭಾಗ, ಜೆಸಿಆರ್ ಬಡಾವಣೆ ಗಣೇಶ ದೇವಸ್ಥಾನದ ಹತ್ತಿರ, ಸಿಹಿನೀರು ಹೊಂಡದ ಆವರಣ, ಪತಂಜಲಿ ಆಸ್ಪತ್ರೆ ಪಕ್ಕ, ಕೆಳಗೋಟೆ ಚೆನ್ನಕೇಶವಸ್ವಾಮಿ ದೇವಸ್ಥಾನ ಹತ್ತಿರ, ತುರುವನೂರು ರಸ್ತೆ, ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮುಂಭಾಗ, ಗೋಪಾಲಪುರ ನೀರಿನ ಟ್ಯಾಂಕ್ ಹತ್ತಿರ, ಗುಮಾಸ್ತರ ಕಾಲನಿ ರೈತ ಭವನದ ಹತ್ತಿರ, ಜೋಗಿಮಟ್ಟಿ ರಸ್ತೆ ತಿಪ್ಪಿನಘಟ್ಟಮ್ಮ ದೇವಸ್ಥಾನ ಸಮೀಪದ ಪಾರ್ಕ್ ಹಾಗೂ ಚಂದ್ರವಳ್ಳಿ ಕೆರೆ ಹತ್ತಿರ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಕೋರಿದ್ದಾರೆ.