ಚಾಮರಾಜನಗರ: ಗಣಪತಿ ಪ್ರತಿಷ್ಠಾನ ಹಾಗೂ ವಿಸರ್ಜನಾ ಮೆರವಣಿಗೆಗಳಲ್ಲಿ ಕಡ್ಡಾಯವಾಗಿ ಡಿಜೆ ಬಳಕೆಯನ್ನು ನಿಷೇಧ ಮಾಡಲಾಗಿದ್ದು, ಅನುಮತಿ ಪಡೆಯುವಾಗ ಈ ಸೂಚನೆಯನ್ನು ಕಟ್ಟಾನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷಕ ಲಕ್ಷ್ಮಯ್ಯ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗೌರಿ-ಗಣೇಶ ಹಬ್ಬದ ಸೌಹಾರ್ದತೆ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಏಕಾಗವಾಕ್ಷಿಯ ಮೂಲಕ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಅನುಮತಿಯನ್ನು ಪಡೆಯುವುದು ಅತ್ಯಾವಶ್ಯಕವಾಗಿದ್ದು, ಗ್ರಾಮಾಂತರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮುನ್ನಾ ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೇ ಡಿಜೆಯನ್ನು ಬಳಕೆ ಮಾಡದಂತೆ ಸೂಚನೆಯನ್ನು ನೀಡಲಾಗಿದ್ದು, ಇದನ್ನು ಆಯೋಜಕರು ಹಾಗೂ ಗ್ರಾಮದ ಮುಖಂಡರು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಡಿಜೆ ಬಳಕೆ ಮಾಡಿ , ಹೆಚ್ಚು ಶಬ್ಧ ಮಾಡಿದರೆ, ವೃದ್ದರು, ಬಾಣಂತಿಯರು, ಮಕ್ಕಳು ಹಾಗೂ ಹೃದಯ ತೊಂದರೆಯುಳ್ಳವರಿಗೆ ತೊಂದರೆಯಾಗುತ್ತದೆ. ಡಿಜೆ ಬಳಕೆಯಿಂದ ಈ ಹಿಂದೆ ಅನೇಕ ಅವಘಡಗಳು ನಡೆದಿವೆ. ಮೂಡ್ನಾಕೂಡು ಗ್ರಾಮದಲ್ಲಿ ಯುವಕನೊಬ್ಬ ಕುಣಿಯುತ್ತಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಡಿಜೆಯನ್ನು ಸಹ ಬಾಡಿಗೆಗೆ ನೀಡದಂತೆ ಮಾಲೀಕರಿಗೆ ಸೂಚನೆ ನೀಡಿದ್ದೇವೆ. ಒಂದು ವೇಳೆ ಡಿಜೆ ಹಾಕಿದರೆ ಅಂಥವರ ಮೇಲೆ ನಿರ್ದಾಕ್ಷ್ಯಣ ಕ್ರಮ ಕೈಗೊಳ್ಳುವುದಾಗಿ ಲಕ್ಷ್ಮಯ್ಯ ಎಚ್ಚರಿಸಿದರು.
ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಬಗ್ಗೆ ಮುಂಚಿತವಾಗಿ ಪೊಲೀಸರಿಗೆ ತಿಳಿಸಬೇಕು. ಇಷ್ಟು ಪ್ರಮಾಣದಲ್ಲಿ ಜನರು ಬರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರಿ ಜಾಗ, ರಸ್ತೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ವೇದಿಕೆಯ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿರಬೇಕು. ರಾತ್ರಿ 10ರ ಬಳಿಕ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ. ಮೆರವಣಿಗೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಅನ್ನು ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಮುಖಂಡರಾದ ವಿರಾಟ್ ಶಿವು, ಮೂಡ್ನಾಕೂಡು ನಾಗರಾಜು ಮಾತನಾಡಿ, ಹಿಂದುಗಳ ಹಬ್ಬವಾಗಿರುವ ಗೌರಿ-ಗಣೇಶ ಹಬ್ಬಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಶಾಂತಿ ಸೌರ್ಹಾಧತೆಯನ್ನು ಕಾಪಾಡಿಕೊಂಡು ಹಬ್ಬ ಆಚರಣೆಗೆ ಎಲ್ಲರು ಸಹಕಾರ ನೀಡಬೇಕು. ಡಿಜೆ ಬಳಕೆಯನ್ನು ನಿಷೇಧ ಮಾಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು. ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶೇಷಾದ್ರಿ, ನವೀನ್, ಸಾಗರ್, ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕ ಮಂಜು, ಸೆಸ್ಕಾಂ ಸಹಾಯಕ ಇಂಜಿನಿಯರ್ ಮಹೇಶ್, ಲೋಕೋಪಯೋಗಿ ಇಲಾಖೆಯ ನಂಜುಂಡ, ವಿದ್ಯಾ ಗಣಪತಿ ಮಂಡಳಿಯ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿಗಳಾದ ಬಂಗಾರನಾಯಕ, ಮಹೇಶ್ ಇತರರು ಇದ್ದರು.