ಜಿಲ್ಲೆ

ಗಣಿಬಾಧಿತ ಪ್ರದೇಶಕ್ಕೆ 1200 ಕೋಟಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮಾಹಿತಿ

ಚಿಕ್ಕನಾಯಕನಹಳ್ಳಿ: -ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯಿಂದ ತಾಲೂಕಿಗೆ ಹಂಚಿಕೆಯಾಗಿರುವ ಹಣವನ್ನು ಸಮರ್ಪಕವಾಗಿ ಬಳಸಿ ಅಭಿವೃದ್ಧಿ ಪಡಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ತಿಳಿಸಿದರು. ಪಟ್ಟಣದ ತೀನಂಶ್ರೀ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಇಲಾಖೆಗಳು ಸೇರಿ ಶಿಕ್ಷಣ ಇಲಾಖೆಗಳು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಸಮರ್ಪಕವಾಗಿ ಮಾಡಬೇಕು. ಕೃಷಿ ಇಲಾಖೆಯಿಂದ ರೈತರಿಗೆ ಸಿಗಬೇಕಾಗಿರುವ ಬಿತ್ತನೆ ಬೀಜ, ರಸಗೊಬ್ಬರದ ಸಮಸ್ಯೆ ಬಾರದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಆಹಾರ ಇಲಾಖೆಯಿಂದ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳಿ. ಈ ತಾಲೂಕಿಗೆ ಭದ್ರಾಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ಮೂರು ನೀರಾವರಿ ಯೋಜನೆಗಳಿದ್ದು, ಅವುಗಳು ಸಮಪರ್ಕವಾಗಿ ಆಗಬೇಕಾಗಿದ್ದು, ಈ ಬಗ್ಗೆ ಗಮನಹರಿಸುವಂತೆ ತಿಳಿಸಿದ ಸಚಿವರು, ಶಾಲೆಗಳ ಅಭಿವೃದ್ಧಿಗೆ 90 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ 78 ಕೋಟಿ ವೆಚ್ಚದ ಕಾಮಗಾರಿಗೆ

ಅನುಮೋದನೆಯಾಗಿದೆ. ಕೂಡಲೇ ಶಾಲಾ ಕಟ್ಟಡಗಳು ಸೇರಿ ಅಗತ್ಯವಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಿಸಬೇಕು ಎಂದರು.

ತಾಲೂಕಿಗೆ ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಒಟ್ಟು 65 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 14 ಕಾಮಗಾರಿಗಳು ಮಂಜೂರಾಗಿದ್ದು, ಅವುಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು. ತಾಲೂಕಿನಲ್ಲಿರುವ ನಿವೇಶನ ರಹಿತರು ಮನೆ ರಹಿತರಿಗೆ ಮನೆಗಳನ್ನು ನೀಡಲು ಸರ್ಕಾರ ಯೊಜನೆ ರೂಪಿಸಿದ್ದು, ಅದಕ್ಕೆ ಕೂಡಲೇ ಮಾಹಿತಿ ಸಂಗ್ರಹಿಸಿ ಸರಿಯಾದ ಅಂಕಿ&ಅಂಶಗಳನ್ನು ನೀಡಿ. 150 ಮನೆಗಳು ಈಗಾಗಲೇ ಗಣಿ ಹಣದಲ್ಲಿ ಮಂಜೂರಾಗಿದ್ದು, ಪ್ರತಿ ಮನೆಗೆ 7.5 ಲಕ್ಷ ಮಂಜೂರಾಗಿದೆ. ಇದನ್ನು ಕೂಡಲೇ ಅನುಷ್ಠಾನಗೊಳಿಸಿ ಕೃಷಿ ಇಲಾಖೆ, ತೋಟಗಾರಿಕೆ, ಪಶುಇಲಾಖೆ, ರೇಷ್ಮೆ, ಶಿಕ್ಷಣ, ಬೆಸ್ಕಾಂ, ಆಹಾರ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

ಅಪರ ಪೊಲೀಸ್​ ಅಧೀಕ್ಷಕ ಗೋಪಾಲ್​, ಎಡಿಸಿ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಚಂದ್ರಶೇಖರ್​, ಕೆಡಿಪಿ ಸದಸ್ಯರಾದ ದೇವರಾಜು, ರಾಮಚಂದ್ರಯ್ಯ, ದೇವರಾಜು, ಶೇಕ್​ ಗೌಸ್​, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್​ ಕೆ.ಪುರಂದರ, ಇಒ ದೊಡ್ಡಸಿದ್ದಯ್ಯ ಇದ್ದರು.

ಅಭಿವೃದ್ಧಿ ಕಾಮಗಾರಿ ಅನುಷ್ಠಾನಕ್ಕೆ ಮನವಿ: ಶಾಸಕ ಸಿ.ಬಿ.ಸುರೇಶ್​ ಬಾಬು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಸೇರಿ ಆಗಲೇಬೇಕಾದ ಯೋಜನೆಗಳ ಬಗ್ಗೆ ಉಸ್ತುವಾರಿ ಮಂತ್ರಿಗಳ ಬಳಿ ವಿವರಿಸಿ ಮಾತನಾಡಿ, ತಾಲೂಕಿಗೆ ಹರಿಯುತ್ತಿರುವ ಹೇಮಾವತಿ ನಾಲೆಗೆ ಕಟ್​ ಆ್ಯಂಡ್​ ಕವರ್​ ಕಾಮಗಾರಿಗೆ 150 ಕೋಟಿ ರೂ. ಮಂಜೂರು ಮಾಡಬೇಕು ಹಾಗೂ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ, ಇದರೊಂದಿಗೆ ಪಶು ಇಲಾಖೆಯ ಪಶು ಆಸ್ಪತ್ರೆಗಳನ್ನು ಮಂಜೂರು, ಕಂದಿಕೆರೆ ಭಾಗಕ್ಕೆ ಹೇಮಾವತಿ ನೀರು ಹರಿಸಲು ಕೆಲವು ತಾಂತ್ರಿಕ ತೊಂದರೆಯಾಗಿದ್ದು, ಅದನ್ನು ಸರಿಪಡಿಸಿ ಹಣ ಬಿಡುಗಡೆ ಮಾಡಬೇಕು. ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಜಾಗದ ಸಮಸ್ಯೆ ಇದ್ದು ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ತುಮಕೂರು ಜಿಲ್ಲೆ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನಕ್ಕೆ ಬರಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕೆಲವು ತಾಲೂಕುಗಳಲ್ಲಿ ನೀರು, ಶಿಕ್ಷಣ, ರಸ್ತೆ ವಿದ್ಯುತ್​ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಬೇಕಾಗಿದೆ.| ಡಾ.ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ