?????????? 
ಜಿಲ್ಲೆ

ಗಣಿಬಾಧಿತ ಪ್ರದೇಶ ಅಭಿವೃದ್ಧಿ ಆದ್ಯತೆಯಾಗಲಿ

ಸಂಡೂರು: ಸಿಇಪಿಎಂಐಜೆಡ್ ಯೋಜನೆಯಡಿ ಗಣಿಭಾದಿತವಲ್ಲದ ಪ್ರದೇಶದಲ್ಲಿ ಕ್ರಿಯಾಯೋಜನೆ ತಯಾರಿಸಿ ನೀಡಲಾಗಿರುವ ಅನುಮೋದನೆ ರದ್ದುಗೊಳಿಸಿ, ಗಣಿಭಾದಿತ ಪ್ರದೇಶಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಉಪ ತಹಸೀಲ್ದಾರ್ ಸುಧಾ ಅರಮನೆಗೆ ಜನಸಂಗ್ರಾಮ ಪರಿಷತ್, ರೈತಸಂಘ, ಕೆಆರ್‌ಎಸ್ ಪಕ್ಷದಿಂದ ಬುಧವಾರ ಮನವಿ ಸಲ್ಲಿಸಲಾಯಿತು.

ಜನಸಂಗ್ರಾಮ ಪರಿಷತ್ ಕಾರ್ಯದರ್ಶಿ ಎ.ಜಿ.ಶ್ರೀಶೈಲ ಮಾತನಾಡಿ, 2005ರಿಂದ 2010 ರವರೆಗೆ ನಡೆದ ಅಕ್ರಮ ಗಣಿಗಾರಿಕೆಯಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿನ 140 ಗ್ರಾಮ ಸೇರಿದಂತೆ ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಒಟ್ಟು 258 ಗ್ರಾಮಗಳನ್ನು ಗಣಿಭಾದಿತ ಎಂದು ಗುರುತಿಸಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ಬಾಧಿತವಾದ ಗ್ರಾಮಗಳಲ್ಲಿ ಪರಿಸರದ ಮೇಲಾಗಿರುವ ದುಷ್ಪರಿಣಾಮಗಳನ್ನು ಮನಗಂಡು ಪುನಶ್ಚೇತನ ಮತ್ತು ಪುನರ್ವಸತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಆದರೆ, 30 ಸಾವಿರ ಕೋಟಿ ರೂ. ಮೇಲೆ ಕಣ್ಣಿಟ್ಟಿರುವ ಸ್ಥಳೀಯ ಜನಪ್ರತಿನಿಧಿಗಳು ತಮಗೆ ಆದಾಯ ತಂದುಕೊಡುವಂತಹ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ ಎಂದು ದೂರಿದರು.

ಗಣಿಬಾಧಿತ ಸಂಡೂರು ತಾಲೂಕಿನಲ್ಲಿ ನರೇಗಾದಡಿ ಹೆಚ್ಚುವರಿಯಾಗಿ 100 ದಿನಗಳ ಉದ್ಯೋಗ ಸೃಷ್ಟಿಸಲು ಅನುದಾನ ನೀಡಬೇಕು. ತಾಲೂಕಿನ ಪ್ರತಿ ಹಳ್ಳಿಯಲ್ಲಿ ವೈದ್ಯರು, ಅಗತ್ಯ ಸಿಬ್ಬಂದಿ ನಿಯೋಜನೆಯೊಂದಿಗೆ ಲ್ಯಾಬ್ ಸಹಿತ ಮೂಲ ಸೌಲಭ್ಯಗಳನ್ನು ಒದಗಿಸಬೇಕು.

ರಾಮಘಡ ಮತ್ತು ಕಮತ್ತೂರು ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಿ ರಾಜ್ಯದಲ್ಲಿಯೇ ಮಾದರಿ ಗ್ರಾಮಗಳನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ನದಿಯಿಂದ ಸಂಡೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭಿಸಬೇಕು. ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಲು ಆಕಳು, ಎಮ್ಮೆ, ಕುರಿ ಸಾಕಾಣಿಕೆಗೆ ಕ್ರಿಯಾ ಯೋಜನೆ ರೂಪಿಸಬೇಕು. ಕೃಷಿ, ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಶ್ರೀಶೈಲ ಆಗ್ರಹಿಸಿದರು.

ಉಪಾಧ್ಯಕ್ಷ ಟಿ.ಎಂ.ಶಿವಕುಮಾರ್ ಮಾತನಾಡಿ, ಗ್ರಾಮ ಸಭೆಗಳ ಮೂಲಕ ಜನಕೇಂದ್ರಿತವಾದ ಕ್ರಿಯಾಯೋಜನೆಗಳನ್ನು ರೂಪಿಸದೆ ಎಸಿ ರೂಮಿನಲ್ಲಿ ಕುಳಿತು ಯೋಜಿಸಿರುವ ಪ್ರಸ್ತಾವನೆಗಳ ಪಟ್ಟಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಚಂದ್ರಶೇಖರ ಮೇಟಿ, ಅಚ್ಯುತ್ ಕುಮಾರ್, ಪ್ರವೀಣ, ಸುಬಾನಿ, ಈಶ್ವರಮ್ಮ, ಸೋಮಕ್ಕ, ಮಂಜುಳ, ಗಂಗಮ್ಮ ಮಂಜುನಾಥ, ಪರಮೇಶಿ, ಹನುಮಂತಪ್ಪ, ಜಿ.ಕೆ.ರಮೇಶ್, ತಾವರೆ ನಾಯ್ಕ, ಜೆ.ಖಾದರ್ ಬಾಷ, ಎನ್.ರವಿಕುಮಾರ್, ಮೆಹಬೂಬ್ ಬಾಷ, ಮಂಜುನಾಥ ಗೌಡ ಇತರರಿದ್ದರು.