ಜಿಲ್ಲೆ

ಗಣಿತ ಪಾತ್ರ ಮಹತ್ವದ್ದು

ಬೀದರ್: ಮನುಷ್ಯನ ದೈನಂದಿನ ಜೀವನದಲ್ಲಿ ಗಣಿತದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬೆಳಮಗಿ ಹೇಳಿದರು.
ಇಲ್ಲಿಯ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತ ಕೂಡಿಸುವುದು, ಕಳೆಯುವುದಕ್ಕಷ್ಟೇ ಸೀಮಿತ ಅಲ್ಲ. ಜೀವನದ ಪ್ರತಿ ಹಂತದಲ್ಲೂ ಬಹಳ ಅವಶ್ಯಕವಾಗಿದೆ ಎಂದು ತಿಳಿಸಿದರು.
ಶ್ರೀನಿವಾಸ ರಾಮಾನುಜ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಗುತ್ತಿದೆ. ಶ್ರೀನಿವಾಸ ಅವರು 32 ವರ್ಷ ಮಾತ್ರ ಬದುಕಿದ್ದರು. ಆದರೆ, ಗಣಿತದಲ್ಲಿ ಅವರು ಮಾಡಿದ ಸಾಧನೆ ಅಗಾಧ ಎಂದು ಬಣ್ಣಿಸಿದರು.
ತಾಲ್ಲೂಕು ಪಂಚಾಯಿತಿಯ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಗೀತಾ ಗಡ್ಡಿ ಮಾತನಾಡಿ, ಶ್ರೀನಿವಾಸ ರಾಮಾನುಜ ಅವರು ಬಾಲ್ಯದಿಂದಲೇ ಗಣಿತದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಮುಂದೆ ಗಣಿತ ತಜ್ಞರಾದರು ಎಂದು ಹೇಳಿದರು.
ಗಣಿತದಿಂದಲೇ ನಮ್ಮ ಜೀವನ ಉಜ್ವಲವಾಗುತ್ತದೆ. ಗಣಿತ ಗೊತ್ತಿಲ್ಲದಿದ್ದರೆ ಬದುಕು ಕಷ್ಟ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಮಾತನಾಡಿ, ಆಸಕ್ತಿಯಿಂದ ಕಲಿತರೆ ಗಣಿತದಷ್ಟು ಸುಲಭ ವಿಷಯ ಮತ್ತೊಂದಿಲ್ಲ ಎಂದು ಹೇಳಿದರು.
ಔರಾದ್‍ನ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಮನೋಹರ ಬಿರಾದಾರ, ಸಹ ಶಿಕ್ಷಕ ಅಶೋಕ ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಗಣಿತ ಮಾದರಿಗಳು ಗಮನ ಸೆಳೆದವು. ವಿದ್ಯಾರ್ಥಿಗಳು ಅಳ್ಳು ಹುರಿದಂತೆ ಮಾದರಿಗಳ ವಿವರಣೆ ನೀಡಿ ಮೆಚ್ಚುಗೆಗೆ ಪಾತ್ರರಾದರು.
ಮುಖ್ಯಶಿಕ್ಷಕರಾದ ಮಲ್ಲಿಕಾರ್ಜುನ ಬೆಂಬಳಗೆ, ವಾಸುದೇವ ರಾಠೋಡ್, ಶಿಕ್ಷಕರಾದ ಸಂಜಯ್ ಪಾಟೀಲ, ಅನಿಲಕುಮಾರ ಟೆಕೋಳೆ, ತಾನಾಜಿ ಆರ್.ಎನ್, ರಮೇಶ ಬಿರಾದಾರ, ಆರತಿ ಬಲ್ಲೂರ, ಗಾಯತ್ರಿ, ಆಶ್ವಿನಿ, ಮೋಹನ್ ಜೋಶಿ, ಭೀಮಶಾ, ನಾಗರತ್ನ, ಮಧುಕರ ರೆಡ್ಡಿ, ಬಸವರಾಜ ಡಿ.ಆರ್, ಕೃಷ್ಣ ಎಸ್.ಎಚ್, ಆನಂದ ಕೆ. ಜಾಧವ್ ಇದ್ದರು.
ಶಿಕ್ಷಕ ರಾಜಕುಮಾರ ಗಾದಗೆ ಸ್ವಾಗತಿಸಿದರು.