ಜಿಲ್ಲೆ

ಗಣಿ ದುಡ್ಡಲ್ಲಿ ಪ್ರತಿ ಮನೆಗೆ 2 ಹಸು

ತುಮಕೂರು ಡೆಸ್ಕ್

ಶಾಸಕ ಸಿ.ಬಿ.ಸುರೇಶ್​ಬಾಬು ಮಾಹಿತಿ, ಚಿ.ನಾ.ಹಳ್ಳಿಯಲ್ಲಿ ಹಾಲು ಕರೆಯುವ ಸ್ಪರ್ಧೆ

ಹುಳಿಯಾರು: ಗಣಿಬಾಧಿತ ಪ್ರದೇಶಾಭಿವೃದ್ಧಿಗಾಗಿ ಮೀಸಲಾಗಿರುವ ಗಣಿ ದುಡ್ಡಲ್ಲಿ ಗಣಿಬಾಧಿತ ಪ್ರದೇಶದ ಹಳ್ಳಿಗಳಿಗೆ ಮನೆಗೆರಡು ಹಸುಗಳನ್ನು ಕೊಡಿಸುವ ಚಿಂತನೆ ಇದ್ದು, ಇದಕ್ಕಾಗಿ ಪಶು ಇಲಾಖೆಯಿಂದ ಸಮೀಕ್ಷೆ ಮಾಡಿಸಿ ವರದಿ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.

ಹುಳಿಯಾರು ಹೋಬಳಿಯ ಸೀಗೆಬಾಗಿ ಗೇಟ್​ನಲ್ಲಿ ಶುಕ್ರವಾರ ಚಿಕ್ಕನಾಯಕನಹಳ್ಳಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಗ್ರಾಪಂನಿಂದ ಹಮ್ಮಿಕೊಂಡಿದ್ದ ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ತಾಲೂಕಿನ ಅನೇಕ ಕುಟುಂಬಗಳ ಬದುಕು ಇಂದು ಹೈನುಗಾರಿಕೆಯಿಂದ ನಡೆಯುತ್ತಿದೆ. ಹಾಗಾಗಿ ಹೈನುಗಾರಿಕೆಗೆ ಉತ್ತೇಜನ ನೀಡುವ ಜತೆಗೆ ವೈಜ್ಞಾನಿಕವಾಗಿಯೂ ಖರ್ಚು ಕಡಿಮೆ ಮಾಡಿ ಹಾಲು ಉತ್ಪಾದಿಸುವ ಸಲುವಾಗಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್​ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ರೈತರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯುವ, ಉಚಿತ ತಪಾಸಣಾ ಶಿಬಿರ, ಬರಡು ರಾಸು ಚಿಕಿತ್ಸಾ ಶಿಬಿರ, ತರಬೇತಿ, ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು. ಹಾಲು ಒಕ್ಕೂಟದಲ್ಲಿ ಈಗ ಗುಣ ಮಟ್ಟದ ಆಧಾರದ ಮೇಲೆ ಹಣ ನೀಡುವ ಪದ್ಧತಿ ಜಾರಿಯಲ್ಲಿದೆ. ಹಾಗಾಗಿ ಹೆಚ್ಚು ಹಾಲು ಹಾಕುವುದರ ಜತೆಗೆ ಗುಣಮಟ್ಟದ ಹಾಲನ್ನು ಡೇರಿಗೆ ಹಾಕಿದರೆ ಹೆಚ್ಚು ಆದಾಯ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ತಳಿ ಆಯ್ಕೆ, ಪಾಲನೆ, ಪೋಷಣೆ, ಕಾಲಕಾಲಕ್ಕೆ ಲಸಿಕೆ ಹಾಗೂ ಗುಣಮಟ್ಟದ ಮೇವು ನೀಡಲು ಒತ್ತು ನೀಡಬೇಕು ಎಂದ ಅವರು, ನಾನೂ ಕೂಡ ಪುಂಗನೂರು ತಳಿಯ 3 ಹಸುಗಳನ್ನು ಮನೆಯಲ್ಲಿ ಸಾಕುತ್ತಿದ್ದೇನೆ ಎಂದು ತಿಳಿಸಿದರು.

ತುಮಕೂರು ಹಾಲು ಒಕ್ಕೂಟದ ನೂತನನಿರ್ದೇಶಕ ಬುಳ್ಳೇನಹಳ್ಳಿ ಶಿವಪ್ರಕಾಶ್​ ಮಾತನಾಡಿ, ಹಿಂದೆ ರೈತನ ಮನೆ ಎಂದರೆ ನಾಟಿ ಹಸುಗಳು ಇರುತ್ತಿದ್ದವು. ಮನೆಯಲ್ಲಿ ಶುದ್ಧ ಹಾಲು, ಮಜ್ಜಿಗೆ, ತುಪ್ಪ ಬಳಕೆ ಜತೆಗೆ ಹಸುವಿನ ಗೊಬ್ಬರದಿಂದ ಬೆಳೆ ಬೆಳೆಯುತ್ತಿದ್ದರು. ಈಗ ಕಾಲ ಬದಲಾಗಿದ್ದು, ಹೈನುಗಾರಿಕೆ ಉದ್ಯೋಗವಾಗಿ ಮಾರ್ಪಟ್ಟಿದೆ. ಹೈನುಗಾರಿಕೆಯಿಂದ ಉದ್ಯೋಗಕ್ಕೆ ಗುಳೆ ಹೋಗುವುದು ತಪ್ಪಿದೆ. ಹಾಗಾಗಿ ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಕ್ಕೂಟದಿಂದ ಹೈನುಗಾರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು. ಸೀಗೆಬಾಗಿ ಡೇರಿ ಅಧ್ಯಕ್ಷ ತಮ್ಮಯ್ಯ, ನಂದಿಹಳ್ಳಿ ಡೇರಿ ಅಧ್ಯಕ್ಷ ಎನ್​.ಜಿ.ಶಿವಣ್ಣ, ಟಿ.ಎಸ್​.ಹಳ್ಳಿ ಡೇರಿ ಅಧ್ಯಕ್ಷ ಬಸವರಾಜು, ಲಕ್ಷ್ಮೀಪುರ ಡೇರಿ ಅಧ್ಯಕ್ಷ ದಿನೇಶ್​, ಪಿಡಿಒ ಚಿಕ್ಕಣ್ಣ, ಪ್ರಗತಿಪರ ಹೈನುಗಾರರಾದ ಪ್ರಕಾಶ್​, ಸಿದ್ದೇಶ್​, ಗ್ರಾಪಂ ಸದಸ್ಯ ಗಂಗಾಧರ್​, ವಿಸ್ತರಣಾಧಿಕಾರಿಗಳಾದ ಸುನೀಲ್​, ವನಜಾಕ್ಷಿ, ಸಿದ್ದಲಿಂಗಸ್ವಾಮಿ ಇತರರು ಇದ್ದರು.

ಡೇರಿಗೆ ಹಾಲು ಹಾಕುವ ಹಸುಗಳಿಗೆ ಒಕ್ಕೂಟದಿಂದ ವಿಮೆ ಮಾಡುತ್ತಾರೆ. ಆದರೆ, ಡೇರಿಗೆ ಹಾಲು ಹಾಕದ ಹಸುಗಳಿಗೆ ವಿಮೆ ಮಾಡುವುದಿಲ್ಲ. ಡೇರಿಯಲ್ಲೂ ಸಹ ವರ್ಷಕ್ಕೆ ಒಮ್ಮೆ ಮಾತ್ರ ವಿಮೆ ಮಾಡುತ್ತಾರೆ. ಮಧ್ಯದಲ್ಲಿ ಹಸು ತಂದರೆ ವಿಮೆಯಿಂದ ವಂಚಿತರಾಗುತ್ತಾರೆ. ಹಾಗಾಗಿ ಯಾವಾಗ ಬೇಕಾದರೂ ವಿಮೆ ಮಾಡುವ ಸೌಲಭ್ಯ ಜಾರಿಯಾಗಬೇಕು. ಬಣವೆ, ದನದ ಹಾಗೂ ಕುರಿ ಕೊಟ್ಟಿಗೆಗಳು ಬೆಂಕಿಗೆ ಆಹುತಿಯಾದಾಗ ಪರಿಹಾರ ಕೊಡುವ ವ್ಯವಸ್ಥೆ ಬರಬೇಕು.| ಸಿಂಗದಹಳ್ಳಿ ರಾಜಕುಮಾರ್​ ನಿರ್ದೇಶಕ, ಡಿಸಿಸಿ ಬ್ಯಾಂಕ್​, ಚಿಕ್ಕನಾಯಕನಹಳ್ಳಿ