ಜಿಲ್ಲೆ

ಗಣಪತಿ ಮೂರ್ತಿ ತಯಾರಿಕೆಗೆ ಸಿದ್ಧತೆ

ಚನ್ನರಾಯಪಟ್ಟಣ: ಸೆಪ್ಟೆಂಬರ್‌ನಲ್ಲಿ ಜರುಗುವ ಗಣೇಶ ಚತುರ್ಥಿಯಂದು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ತಯಾರಿಕೆಗೆ ಶನಿವಾರ ಮಣ್ಣಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಸಿ.ಎನ್.ಬಾಲಕೃಷ್ಣ, ಸಮಿತಿಯ ಪದಾಧಿಕಾರಿಗಳು ಚಾಲನೆ ನೀಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಪಟ್ಟಣದ ಗಣಪತಿ ಸೇವಾ ಸಮಿತಿಗೆ ರಾಜ್ಯದಲ್ಲೇ ವಿಶೇಷ ಸ್ಥಾನಮಾನವಿದೆ. ಸಮಿತಿಯು ಜಾತ್ಯಾತೀತವಾಗಿ ಗಣೇಶ ಹಬ್ಬವನ್ನು ಆಚರಿಸುತ್ತಾ ಪಟ್ಟಣದ ಸರ್ವಧರ್ಮಗಳು ಒಂದೇ ಎಂಬುದನ್ನ್ನು ಬಿಂಬಿಸಿದೆ. 68 ವರ್ಷಗಳು ಸತತವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬಂದಿರುವ ಸೇವಾ ಸಮಿತಿಯು 69ನೇ ವರ್ಷದ ಮಹೋತ್ಸವಕ್ಕಾಗಿ ಏಕಾದಶಿ ಶುಭದಿನದಂದು ಮಣ್ಣಿನ ಪೂಜೆ ನೆರವೇರಿಸುತ್ತಿದೆ. 49 ದಿನ ಮೂರ್ತಿಯನ್ನು ಇಟ್ಟು ಪೂಜೆ, ಪುನಸ್ಕಾರಗಳನ್ನು ಕೈಗೊಂಡು ವಿಸರ್ಜನೆ ಮಾಡುವುದು ಪದ್ಧತಿ, ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಗಣೇಶ ಹಬ್ಬ ಇಂದಿಗೂ ದೇಶದಲ್ಲಿ ಹೆಚ್ಚು ಭಕ್ತ ಸಮೂಹವನ್ನು ಹೊಂದಿ ಏಕಕಾಲದಲ್ಲಿ ಆಚರಿಸುವ ಬಹುದೊಡ್ಡ ಹಬ್ಬವಾಗಿದೆ ಎಂದ ಅವರು, ಶಾಸಕನಾಗಿ ಗಣೇಶನ ಭಕ್ತನಾಗಿ ಸೇವಾ ಸಮಿತಿಯೊಂದಿಗೆ ಸದಾ ಇರುವುದಾಗಿ ಭರವಸೆ ನೀಡಿದರು.

ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಕೆ.ಕೃಷ್ಣ ಮಾತನಾಡಿ, ಈ ಬಾರಿಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ 48 ದಿನ ಪೂಜಿಸಲಾಗುವುದು. ಪ್ರತಿದಿನ ಅನ್ನದಾನ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪ ಮಾಡಲಾಗಿದೆ. ಈ ಬಾರಿಯ ಅನ್ನದಾನಕ್ಕಾಗಿ 25,000 ರೂ. ದರ ನಿಗದಿಪಡಿಸಲಾಗಿದ್ದು, ಪಟ್ಟಣದ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್.ಅಶೋಕ್ಕ, ನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿದರು. ಪುರಸಭಾ ಮಾಜಿ ಸ್ಥಾಯಿ ಸಮಿತಿ ಸದಸ್ಯ ಅಧ್ಯಕ್ಷೆ ಬನಶಂಕರಿ ರಘು, ರೈತ ಸಂಘದ ಅಧ್ಯಕ್ಷ ಮಂಜೇಗೌಡ, ಸೇವಾ ಸಮಿತಿ ಪದಾಧಿಕಾರಿಗಳಾದ ನಂಜುಂಡ ಮೈಮ್, ಮನೋಹರ್, ಸತ್ಯನಾರಾಯಣ್ ಶುಭಾ ವೆಂಕಟೇಶ್, ಕಲಾವಿದರ ಸಂಘದ ಅಧ್ಯಕ್ಷ ರಾಮಣ್ಣ, ಪುರಸಭಾ ಸದಸ್ಯರಾದ ಸುಜಾತಾ, ನವೀನ್, ಮೋಹನ್, ಗಣೇಶ್, ಮಹೇಶ್ ಇದ್ದರು.