ಜಿಲ್ಲೆ

ಗಣಪತಿ ಕೋ-ಆಪರೇಟಿವ್ ಬ್ಯಾಂಕಲ್ಲಿ ಬಡ್ಡಿ ಮಾಫಿಯಾ: ಹಿತರಕ್ಷಣಾ ಸಮಿತಿ ಪ್ರತಿಭಟನೆ

ಸಾಗರ: ಗಣಪತಿ ಕೋ-ಆಪರೇಟಿವ್ ಬ್ಯಾಂಕ್‌ನ ಗ್ರಾಹಕ ಹಾಗೂ ಷೇರು ವಿರೋಧಿ ನೀತಿ ಖಂಡಿಸಿ ಹಿತರಕ್ಷಣಾ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಗ್ರಾಹಕ ಮತ್ತು ಷೇರುದಾರರ ಹಿತರಕ್ಷಣಾ ಸಮಿತಿಯ ಸಂಚಾಲಕ ಎಸ್.ವಿ.ಹಿತಕರ ಜೈನ್, ಬ್ಯಾಂಕಿನ ಚಾಲಕ ಮತ್ತು ಸಿಬ್ಬಂದಿ ಹುದ್ದೆಗಳಿಗೆ ಆಯ್ಕೆ ಮಾಡುವ ಸಮಿತಿಗಳು ನಿಯಮಾನುಸಾರ ರಚಿತವಾಗಿಲ್ಲ. ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ, ನೇಮಕಾತಿಯಲ್ಲಿಯೂ ಮೀಸಲಾತಿ ನಿಯಮವನ್ನು ಅನುಸರಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ ಅವರು, ಹೊರ ಜಿಲ್ಲೆಯವರನ್ನು ಆಯ್ಕೆ ಮಾಡಿಕೊಳ್ಳುವ ಜಾಣತನವನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕಿನಲ್ಲಿಯೇ ಸಾಲ ನವೀಕರಣದ ಹೆಸರಿನಲ್ಲಿ ಅನಧಿಕೃತ ಬಡ್ಡಿ ಮಾಫಿಯಾ ನಡೆಯುತ್ತಿದ್ದು, ಈ ಬಗ್ಗೆ ತನಿಖೆಯಾಗಬೇಕು. ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ಹಿರಿತನದ ಆಧಾರದ ಮೇಲೆ ನೀಡಬೇಕು. ಇಲ್ಲಿಯೂ ನಿಯಮ ಉಲ್ಲಂಘನೆಯಾಗಿದೆ. ಪ್ರತಿಷ್ಠಿತ ಬ್ಯಾಂಕ್ ಕೆಲವರ ಬಿಗಿ ಮುಷ್ಠಿಯಲ್ಲಿದೆ ಎಂದು ದೂರಿದರು.

ಬ್ಯಾಂಕಿಗೆ ಆದಾಯ ತಂದುಕೊಡುವ ಪಿಗ್ಮಿ ಸಂಗ್ರಹಕರನ್ನು ಜೀತದಾಳಿನಂತೆ ನಡೆಸಿಕೊಳ್ಳುತ್ತಿರುವ ವಿಚಾರ ಜನತೆಗೆ ತಿಳಿದಿದೆ. ಶಿವಮೊಗ್ಗ ಮತ್ತು ಹೊಸನಗರದ ಶಾಖೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇವುಗಳ ವಹಿವಾಟು ನಷ್ಟದಲ್ಲಿದೆ. ಬ್ಯಾಂಕಿನ ಅಧಿಕಾರಿಗಳು ಅಕ್ರಮವಾಗಿ ನಿಯಮ ಉಲ್ಲಂಘಿಸಿ ವೇತನ, ಬಡ್ತಿ ಹೆಚ್ಚಿಸಿಕೊಳ್ಳುತ್ತಿರುವ ಕುರಿತು ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು. ಸಹಕಾರಿ ಸಂಸ್ಥೆಗಳು ಸೇವಾ ಮನೋಭಾವದಿಂದ ನಡೆಯಬೇಕು, ಬಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು. ಇಲ್ಲಿ ಕೆಲವು ಅಧಿಕಾರಿಗಳು ಜನರ ಸಂಪರ್ಕವಿಲ್ಲದೇ ಮಹಡಿಯ ಮೇಲೆ ಕುಳಿತು ದರ್ಪ ಮಾಡುತ್ತಾರೆ, ಬ್ಯಾಂಕಿನ ಷೇರುದಾರರು ಇವೆಲ್ಲವನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.