ಜಿಲ್ಲೆ

ಗಣಪತಿ ಅದ್ದೂರಿ ವಿಸರ್ಜನೆ ಮಹೋತ್ಸವ

ರಾಜಣ್ಣ

ಶನಿವಾರಸಂತೆ: ಸ್ಥಳೀಯ ಏಕದಂತ ಟ್ರಾೃಕ್ಟರ್ ಮಾಲೀಕರ ಸಂಘದ ವತಿಯಿಂದ ಕಳೆದ 62 ದಿನದ ಹಿಂದೆ ಗೌರಿ-ಗಣೇಶನ ಹಬ್ಬದ ಪ್ರಯುಕ್ತ ಪಟ್ಟಣದ ಚಂಗಡಹಳ್ಳಿ ರಸ್ತೆ ಬಳಿ ಪ್ರತಿಷ್ಠಾಪಿಸಿದ್ದ ಗೌರಿ-ಗಣಪತಿ ಮೂರ್ತಿಯನ್ನು ಬುಧವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.

ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೃಹತ್ ವೇದಿಕೆಯಲ್ಲಿ 12 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಳೆದ 62 ದಿನಗಳಿಂದ ಇಲ್ಲಿ ಪ್ರತಿದಿನ ಪೂಜಾ ಕಾರ್ಯಗಳು ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿತ್ತು.

ಬುಧವಾರ ಬೆಳಗ್ಗೆಯಿಂದಲೇ ಗೌರಿ-ಗಣಪತಿ ಮೂರ್ತಿಗೆ ವಿಶೇಷ ಪೂಜೆ, ಹೋಮ ಹವನಗಳನ್ನು ನೆರವೇರಿಸಲಾಯಿತು. ಸಂಜೆ ವಿಸರ್ಜನೆ ಮೆರವಣಿಗೆಯ ಸಲುವಾಗಿ ವಾಹನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಬೃಹತ್ ಮಂಟಪದಲ್ಲಿ ಕ್ರೇನ್ ಮೂಲಕ 12 ಅಡಿಯ ಗಣಪತಿ ಮೂರ್ತಿಯನ್ನು ಕೂರಿಸಲಾಯಿತು. ಸಂಜೆ 5 ಗಂಟೆಯಿಂದ ಗೌರಿ ಗಣಪತಿ ವಿಸರ್ಜನಾ ಮೆರವಣಿಗೆಯು ಪಟ್ಟಣದ ಕೆಆರ್‌ಸಿ ವೃತ್ತದಿಂದ ಮುಖ್ಯ ರಸ್ತೆ ಮೂಲಕ ಗುಡುಗಳಲೆ ಜಂಕ್ಷನ್‌ವರೆಗೆ ತೆರಳಿತು. ನಂತರ ಅದೇ ರಸ್ತೆ ಮೂಲಕ ಶೋಭಯಾತ್ರೆ ಚಂಗಡಹಳ್ಳಿ-ಸುಬ್ರಮಣ್ಯ ರಸ್ತೆ ಮೂಲಕವಾಗಿ ಸಾಗಿತು. ತದನಂತರ ರಾತ್ರಿ ಕಾಜೂರು ನದಿಯಲ್ಲಿ ಗೌರಿ-ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯ ವಿಶೇಷತೆ: ವಾದ್ಯಗೋಷ್ಠಿ, ಕೀಲುಕುದುರೆ, ಬಾಳುಪೇಟೆಯ ಹಿಂದು ಟೈಗರ್ಸ್ ತಂಡದವರಿಂದ ನಾಸಿಕ್ ಬ್ಯಾಂಡ್, ಹೊದ್ದೂರಿನ ಕಲಾತಂಡದಿಂದ ವೀರಗಾಸೆ ಕುಣಿತ, ದುದ್ಲಾಪುರದ ಮಂಜುಶ್ರೀ ಜಾನಪದ ಕಲಾ ತಂಡದಿಂದ ಜಾನಪದ ನೃತ್ಯ, ಪುರುಷಕೋಡಿಯ ಕಾಳಿಕಾಂಬ ಗೊಂಬೆ ಬಳಗದವರಿಂದ ಗೊಂಬೆ ನೃತ್ಯ ಪ್ರದರ್ಶನದೊಂದಿಗೆ ಮೆರವಣಿಗೆ ಸಾಗಿತು.

ಮೆರವಣಿಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.