ಜಿಲ್ಲೆ

ಗಣತಿಗೆ ಸುಶಿಕ್ಷಿತರಲ್ಲೇ ಹೆಚ್ಚು ನಿರಾಸಕ್ತಿ

ಮಂಜುನಾಥ ತಿಮ್ಮಯ್ಯ ಮೈಸೂರು

ವಿವಿಧ ಅಡೆತಡೆಗಳು ನಡುವೆಯೂ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ.80ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಗಣತಿ ಕಾರ್ಯವನ್ನು ಇನ್ನೂ ಎರಡು ದಿನದಲ್ಲಿ ಮುಗಿಸುವ ಸವಾಲು ಎದುರಾಗಿದೆ..!

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷಾ ಕಾರ್ಯ ಸೆ.22ರಿಂದ ನಡೆಯುತ್ತಿದೆ. ಇದು ಅಕ್ಟೋಬರ್ 7ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿದ್ದರಿಂದ ಅ.18ರ ವರೆಗೆ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಗಣತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಹೆಚ್ಚುವರಿಯಾಗಿ ದೊರೆತ 11 ದಿನಗಳಲ್ಲಿ ಸಮೀಕ್ಷಾ ಕಾರ್ಯಕ್ಕೆ ಏನೋ ವೇಗ ದೊರೆತಿದೆ. ನಿಗದಿತ ಅವಧಿಯೊಳಗೆ ನೂರರಷ್ಟು ಪ್ರಗತಿ ಸಾಧನೆ ಕಷ್ಟಕರ ಎಂಬ ಮಾತುಗಳು ಕೇಳಿಬರುತ್ತಿವೆ.

ಯಾವುದೇ ಸಮೀಕ್ಷೆಗಳಲ್ಲಿ ನೂರಕ್ಕೆ ನೂರರಷ್ಟು ಸಾಧನೆಯಾಗಲ್ಲ. ಅದಕ್ಕೆ ಅನೇಕ ಕಾರಣಗಳು ಇರುತ್ತವೆ. ಅಂತೆಯೇ, ಈ ಸಮೀಕ್ಷೆಗೂ ಕೆಲವು ವಿಘ್ನಗಳು ಎದುರಾಗಿವೆ. ಸಮೀಕ್ಷಾದಾರರಿಗೆ ಮಾಹಿತಿ ನೀಡಲು ಕುಟುಂಬಗಳ ನಿರಾಕರಣೆ, ಬಾಗಿಲು ಹಾಕಿರುವ ಮನೆಗಳು, ನಿವಾಸಿದಾರ ಬೇರೆ ಊರಿಗೆ ವಲಸೆ ಮತ್ತು ಬಾಡಿಗೆದಾರರ ಮನೆಗಳ ಸ್ಥಳಾಂತರದಿಂದ ಸಮೀಕ್ಷೆ ನೂರರಷ್ಟು ಯಶಸ್ಸು ಸಿಗುವ ಸಾಧ್ಯತೆ ಕಡಿಮೆ. ಆದರೆ ಶೇ.90ರ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಮಾಂತರಕ್ಕಿಂತ ನಗರದಲ್ಲೇ  ನಿರಾಸಕ್ತಿ:

ಗಣತಿಗಾಗಿ ಜಿಲ್ಲೆಯಲ್ಲಿ ಅಂದಾಜು 10 ಲಕ್ಷ ಮನೆಗಳನ್ನು ಗುರುತಿಸಲಾಗಿದೆ. ಜಿಲ್ಲಾದ್ಯಂತ ಸಮೀಕ್ಷೆಗಾಗಿ 7,686 ಗಣತಿದಾರರು ನಿತ್ಯ ಶ್ರಮಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಜನರು ಸಮೀಕ್ಷೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಗರ ಪ್ರದೇಶದ ಸುಶಿಕ್ಷಕಿತರೇ ಆಸಕ್ತಿ ತೋರುತ್ತಿಲ್ಲ. ಮನೆಗೆ ಬಂದ ಗಣತಿದಾರರಿಗೆ ಮಾಹಿತಿ ನೀಡಲು ನಿರಾಕರಣೆ, ‘ನಾಳೆ ಬಾ’ ಎಂದು ಹೇಳಿ ಸಾಗಿ ಹಾಕುವ ಕೆಲಸ, ಮನೆಯಲ್ಲಿ ಇದ್ದರೂ ಯಾರೂ ಇಲ್ಲ ಎಂಬ ಕುಂಟು ನೆಪದಿಂದ ಹೇಳುವ ಮೂಲಕ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಇದುವೇ ಗಣತಿದಾರರನ್ನು ಹೈರಾಣ ಮಾಡಿದೆ.

ಮನೆಗಳಿಗಾಗಿ ಹುಡುಕಾಟ ನಿಂತಿಲ್ಲ:

ಈಗಾಗಲೇ ಜಿಲ್ಲಾದ್ಯಂತ ಎಲ್ಲ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವಿಕೆ ಮತ್ತು ಮ್ಯಾಪಿಂಗ್ ಮಾಡುವ ಕೆಲಸ ವ್ಯವಸ್ಥಿತವಾಗಿ ಆಗಿದೆ. ಅಭಿವೃದ್ಧಿಪಡಿಸಲಾದ ಅಪ್ಲಿಕೇಶನ್‌ನಲ್ಲಿ ಮನೆಯ ಸ್ಥಳವನ್ನು ಸೆರೆಹಿಡಿಯಲಾಗಿದೆ. ಪ್ರತಿ ಮನೆಗಳಿಗೆ ವಿಶಿಷ್ಟ ಸಂಖ್ಯೆಯನ್ನು ನೀಡಲಾಗಿದೆ. ಇದರ ಆಧಾರದ ಮೇಲೆ ಸಮೀಕ್ಷಾದಾರರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಮನೆಗಳು ಒಂದೆಡೆ ಇಲ್ಲ. ಒಂದೇ ಕೇರಿ, ಬೀದಿಯಲ್ಲೂ ಇಲ್ಲ. ಒಂದು ಬಡಾವಣೆ, ಒಂದು ಪ್ರದೇಶದಲ್ಲೂ ಇಲ್ಲ. ಹಂಚಿಕೆ ಮಾಡಿರುವ ಮನೆಗಳು ಒಂದೊಂದು ಕಡೆ ಇವೆ. ಇವುಗಳನ್ನು ಹುಡುಕುವುದರಲ್ಲೇ ಬಹಳಷ್ಟು ಸಮೀಕ್ಷೆದಾರರನ್ನು ಸುಸ್ತು ಮಾಡಿದೆ.

ಬಾಡಿಗೆ ಮನೆಯವರು ಸಿಗುತ್ತಿಲ್ಲ:

1-2 ವರ್ಷಕ್ಕೆ ಮನೆ ಖಾಲಿ ಮಾಡಿರುವ ಬಾಡಿಗೆ ಮನೆದಾರರೇ ಸಿಗುತ್ತಿಲ್ಲ. ಹಳೇ ವಿಳಾಸ ಆಧಾರದ ಮೇಲೆ ಮನೆ ಹಂಚಿಕೆಯಾಗಿವೆ. ಆದರೆ ಅಲ್ಲಿಗೆ ಹೋದರೆ ಆ ವಿಳಾಸದಾರರು ಇಲ್ಲ. ಮನೆ ಖಾಲಿ ಮಾಡಿಕೊಂಡು ಇನ್ನೂ ಎಲ್ಲಿಗೋ ಹೋಗಿದ್ದಾರೆ. ಅವರನ್ನು ಶೋಧಿಸುವುದೇ ಕಷ್ಟಕರವಾಗಿದೆ. ಅಂತಹವರು ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ ಎಂದು ಸಮೀಕ್ಷೆದಾರರೊಬ್ಬ ತಿಳಿಸಿದರು.

ಮಾಹಿತಿ ಕೊಡಲು ಸತಾಯಿಸುತ್ತಾರೆ:

ಕೆಲವು ಮನೆಯವರು ಬೆಳಗ್ಗೆ ಬನ್ನಿ, ಸಂಜೆ ಬನ್ನಿ, ನಾಳೆ ಬನ್ನಿ ಎಂದು ಹೇಳಿ ಸಮಯ ಹಾಳು ಮಾಡುತ್ತಿದ್ದಾರೆ. ಒಂದೊಂದು ಮನೆಗಾಗಿ ಅಲೆಯಬೇಕಾಗಿದೆ. ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ನಂಬರ್ ಕೊಟ್ಟರೆ 15-20 ನಿಮಿಷದಲ್ಲೇ ಸಮೀಕ್ಷೆ ಕಾರ್ಯ ಮುಗಿದು ಹೋಗುತ್ತದೆ. ಇಷ್ಟು ಕೊಡಲು ಕೆಲವು ಮನೆಯವರು ಸತಾಯಿಸುತ್ತಾರೆ. ಇದು ಸಮೀಕ್ಷೆ ವಿಳಂಬಕ್ಕೆ ಕಾರಣವಾಗಿದೆ ಎಂದು ಮಹಿಳಾ ಸಮೀಕ್ಷೆದಾರರೊಬ್ಬರು ತಿಳಿಸಿದರು.

ತಪ್ಪು ಮಾಹಿತಿ, ಗೊಂದಲ, ದ್ವಂದ್ವ

ಸಮೀಕ್ಷೆ ಹಿಂದಿನ ಉದ್ದೇಶವೇ ಬಹಳಷ್ಟು ಜನರಿಗೆ ಅರ್ಥವಾಗಿಲ್ಲ. ಶಿಕ್ಷಿತರು, ಉದ್ಯೋಗಸ್ಥರು ತಿಳಿದಿಲ್ಲ. ಸರ್ಕಾರದ ವಿವಿಧ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶ ಈ ಸಮೀಕ್ಷೆಯಿಂದ ದೊರೆಯಲಿದೆ ಎಂಬ ಸತ್ಯವೇ ಬಹಳಷ್ಟು ಜನರಿಗೆ ತಲೆಗೆ ಹೋಗುತ್ತಿಲ್ಲ.

ಬದಲಿಗೆ ತಪ್ಪು ಮಾಹಿತಿ, ಗೊಂದಲ, ದ್ವಂದ್ವಗಳೇ ಅವರ ತಲೆಯಲ್ಲಿ ತುಂಬಿಕೊಂಡಿವೆ. ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂಬ ಅಪನಂಬಿಕೆ ಬಹಳಷ್ಟು ಜನರನ್ನು ಕಾಡುತ್ತಿದೆ. ಉದ್ಯೋಗನಿಧಿ ಯೋಜನೆಯ ಲಾಭ ಕೈತಪ್ಪಿಲಿದೆ ಎಂಬ ಆತಂಕ ಇದರ ಫಲಾನುಭವಿಗಳಾಗಿರುವ ಪದವಿ ಪೂರೈಸಿರುವ ಯುವಜನರಲ್ಲಿ ಇದೆ. ಹೀಗಾಗಿ, ನೈಜ ಮಾಹಿತಿ ಮರೆಮಾಚಿದ್ದಾರೆ ಎಂದು ಸಮೀಕ್ಷೆದಾರರೊಬ್ಬರು ತಿಳಿಸಿದರು.

ಜಿಲ್ಲಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉತ್ತಮ ರೀತಿಯಲ್ಲಿ ಸಾಗಿದೆ. ಈಗಾಗಲೇ ಶೇ.80ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿದ ದಿನಗಳಲ್ಲಿ ಬಾಕಿ ಕೆಲಸವೂ ಪೂರ್ಣಗೊಳಲಿದೆ. ಎಲ್ಲಿಯೂ ಸಮಸ್ಯೆಗಳು ಎದುರಾಗಿಲ್ಲ.ರಾಘವೇಂದ್ರ, ಉಪ ನಿರ್ದೇಶಕಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ