ಬಾಗೇಪಲ್ಲಿ: ತಾಲೂಕು ಡಿಸಿಸಿ ಬ್ಯಾಂಕ್ ವ್ಯಾಪ್ತಿಯ 23 ಸಹಕಾರ ಸಂಘಗಳ ವಹಿವಾಟನ್ನು ಸಂಪೂರ್ಣ ಗಣಕೀಕರಣಗೊಳಿಸಿ ಸಕಾಲಕ್ಕೆ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವುದೇ ನಮ್ಮ ಮುಖ್ಯ ಗುರಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ತಿಳಿಸಿದರು.
ತಾಲೂಕಿನ ಮಾರಗಾನುಕುಂಟೆ, ಚೆಂಚುರಾಯನಪಲ್ಲಿ, ಪಾಳ್ಯಕೆರೆ, ಕೊತ್ತಕೋಟೆ, ನಲ್ಲಪರೆಡ್ಡಿಪಲ್ಲಿ, ಪುಟ್ಟಪರ್ತಿ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿನ ಗಣಕೀಕರಣ ಕೇಂದ್ರಗಳಿಗೆ ಶಾಖಾ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಚಾಕವೇಲು ಮತ್ತು ಅಚೇಪಲ್ಲಿ ಸಂಘಗಳನ್ನು ಪ್ರಥಮ ಹಂತದಲ್ಲಿ ಗಣಕೀಕರಣ ಮಾಡಲಾಗಿದ್ದು, ಎರಡನೇ ಹಂತದಲ್ಲಿ 7 ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಲಾಗಿದೆ. ಉಳಿದ 14 ಸಹಕಾರ ಸಂಘಗಳಲ್ಲಿಯೂ ಒಂದು ತಿಂಗಳೊಳಗೆ ಜಾರಿ ಮಾಡಲಾಗುವುದು ಎಂದರು.
ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ, ಪಡೆದಿರುವ ಸಾಲ ಹಾಗೂ ಮರುಪಾವತಿ ಮಾಹಿತಿಯನ್ನು ಗಣಕೀಕೃತ ಯಂತ್ರದಲ್ಲಿ ಅಳವಡಿಸಲಾಗುತ್ತದೆ. ಎಲ್ಲ ವಹಿವಾಟು ಆನ್‌ಲೈನ್ ಮೂಲಕ ನಡೆಯುವುದರಿಂದ ರೈತರು ಯಾವುದೇ ರೀತಿಯ ವಂಚನೆಗೆ ಗುರಿಯಾಗುವುದಿಲ್ಲ, ಆರ್ಥಿಕ ವಹಿವಾಟಿ ಹಾಗೂ ವಿವಿಧ ಸೌಲಭ್ಯಗಳ ಮಾಹಿತಿಯೂ ಲಭ್ಯವಾಗಲಿದೆ ಎಂದು ತಿಳಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಸಿ.ಎನ್.ಚೇತನ್, ಮೇಲ್ವಿಚಾರಕ ಲಿಂಗರಾಜು, ವಿವಿಧ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀನಿವಾಸರೆಡ್ಡಿ, ಕೆ.ಎನ್.ಬೈಯಪ್ಪರೆಡ್ಡಿ, ಇದಾಯಿತ್‌ವುಲ್ಲಾ ಇತರರಿದ್ದರು.