ಜಹೀರಾಬಾದ್ ತಾಲೂಕಿನ ಹದನೂರನಲ್ಲಿ ಆಯೋಜಿಸಿದ್ದ ತೆಲಂಗಾಣ ಗಡಿ ಉತ್ಸವವನ್ನು ಪ್ರೊ.ಎಸ್.ವಿ.ಪಾಟೀಲ್ ಉದ್ಘಾಟಿಸಿದರು. ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ, ಡಾ.ರಾಜಕುಮಾರ ಹೆಬ್ಬಾಳೆ, ಜೆಕಲು ಹನುಮಂತ, ಪ್ರೊ.ವಿಷ್ಣುವರ್ಧನ ರಡ್ಡಿ ಇತರರಿದ್ದರು. 
ಜಿಲ್ಲೆ

ಗಡಿ ಭಾಗದ ಕನ್ನಡ ಶಾಲೆಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿ

ಬೀದರ್: ಕರ್ನಾಟಕ-ತೆಲಂಗಾಣ ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಶಾಲೆಗಳಿಗೆ ಸರ್ಕಾರ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಪ್ರೊ.ಎಸ್.ವಿ. ಪಾಟೀಲ್ ಹೇಳಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಸಿದ್ದೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಡಿ ಕರ್ನಾಟಕ ಸಂಭ್ರಮ-೫೦ರ ನಿಮಿತ್ತ ತೆಲಂಗಾಣದ ಜಹೀರಾಬಾದ್ ತಾಲೂಕಿನ ಹದನೂರದಲ್ಲಿ ಸೋಮವಾರ ಆಯೋಜಿಸಿದ್ದ ತೆಲಂಗಾಣ ಗಡಿ ಉತ್ಸವ ಉದ್ಘಾಟಿಸಿದ ಅವರು, ಶಾಲೆಗಳಲ್ಲಿ ಪೀಠೋಪಕರಣ, ಪಾಠೋಪಕರಣ, ಗ್ರಂಥಾಲಯ, ಉದ್ಯಾನ, ನೀರು, ವಸತಿ, ರಸ್ತೆಗಳಂಥ ಮೂಲಸೌಕರ್ಯ ಒದಗಿಸಿದಾಗಲೇ ಕನ್ನಡ ಉಳಿಸಲು ಸಾಧ್ಯ ಎಂದರು.

ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಶಿಕ್ಷಕರಿಗೆ ವಸತಿಸೌಲಭ್ಯ ಒದಗಿಸಬೇಕು. ತೆಲಂಗಾಣ ಸರ್ಕಾರ ಕನ್ನಡ ಶಾಲೆಗಳನ್ನು ಬಂದ್ ಮಾಡದೆ ಉಳಿಸಿ ಬೆಳೆಸಿ ಗಡಿಯಲ್ಲಿ ಸಾಮರಸ್ಯ ಕಾಪಾಡಬೇಕು. ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪರಸ್ಪರ ಸಾಂಸ್ಕೃತಿಕ ವಿನಿಮಯ ನಡೆಯಬೇಕು. ಈ ನಿಟ್ಟಿನಲ್ಲಿ ಡಾ.ರಾಜಕುಮಾರ ಹೆಬ್ಬಾಳೆ ಕಾರ್ಯ ಶ್ಲಾಘನೀಯ ಎಂದು ಕೊಂಡಾಡಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ.ವಿಷ್ಣುವರ್ಧನ ರಡ್ಡಿ ಮಾತನಾಡಿ, ಮೊಬೈಲ್ ಯುಗದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮರೆಮಾಚುತ್ತಿದೆ. ಕಲೆ ಮತ್ತು ಸಾಹಿತ್ಯ ಉಳಿಯದ ಹೊರತು ಸಂಸ್ಕೃತಿ ಉಳಿಸಲು ಸಾಧ್ಯವಿಲ್ಲ. ನಾವೆಲ್ಲ ಭಾರತೀಯರೆಂಬ ಭಾವದಿಂದ ಗಡಿಯಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಮರಸ್ಯ ಕಾಪಾಡುವ ಅಗತ್ಯವಿದೆ ಎಂದರು.

ಬಸವ ಗಂಗೋತ್ರಿ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿದರು. ಸಾಹಿತಿ ಮಹಾರುದ್ರ ಡಾಕುಳಗೆ ವಿಶೇಷ ಉಪನ್ಯಾಸ ನೀಡಿದರು.

ಜಹೀರಾಬಾದ್ ವೃತ್ತ ನಿರೀಕ್ಷಕ ಜೆಕಲು ಹನುಮಂತ, ಸಿದ್ದೇಶ್ವರ ಬೆಲ್ಲದ ಕಾರ್ಖಾನೆ ಮುಖ್ಯಸ್ಥ ಅಶೋಕ ಹೆಬ್ಬಾಳೆ, ಎಚ್.ಸಿದ್ದಣ್ಣ, ಶಿವಶರಣಪ್ಪ ಗಣೇಶಪುರ, ಅಮೃತ, ವಿ.ಪಿ. ಸಿಂಗ್, ಮಲ್ಲಪ್ಪ ಗಣೇಶಪುರ, ಸೀನು ಗಂಗವಾರ, ಮಲ್ಲರಡ್ಡಿ ಇತರರಿದ್ದರು. ಅಶೋಕ ಎಚ್. ಸ್ವಾಗತಿಸಿದರು. ಮಹೇಶಕುಮಾರ ಕುಂಬಾರ ನಿರೂಪಣೆ ಮಾಡಿದರು. ವೇದಲಕ್ಷ್ಮೀ ವಂದಿಸಿದರು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಅಶ್ವಿನಿ ರಾಜಕುಮಾರ ಬಂಪಳ್ಳಿ ಸುಗಮ ಸಂಗೀತ, ಮಹೇಶಕುಮಾರ ಕುಂಬಾರ ತಂಡದ ಜನಪದ ಹಾಡು, ದೇವದಾಸ ಚಿಮಕೋಡ ಹಾಗೂ ವೀಣಾ ಚಿಮಕೋಡ ರಂಗ ಗೀತೆಗಳು, ಶೇಷಪ್ಪ ಚಿಟ್ಟಾ ಹಲಗೆ ವಾದನ, ಮೀರಾಬಾಯಿ ತಂಡದ ಲಂಬಾಣಿ ನೃತ್ಯ, ಹದನೂರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತ್ಯ ಸಭಿಕರ ಗಮನ ಸೆಳೆಯಿತು.

ಕರ್ನಾಟಕ-ತೆಲಂಗಾಣ ಗಡಿಭಾಗದಲ್ಲಿ ನಿರಂತರ ಜಾನಪದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರತ್ನಾಪುರ, ಮಾಮಿಡಿಗಿ, ಹದನೂರ, ಗಣೇಶಪುರ ಸೇರಿ ಹಲವೆಡೆ ಕಾರ್ಯಕ್ರಮ ಆಯೋಜಿಸಿ ಪರಸ್ಪರ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಡಲಾಗುತ್ತಿದೆ.

| ಡಾ.ರಾಜಕುಮಾರ ಹೆಬ್ಬಾಳೆ

ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ