ಜಿಲ್ಲೆ

ಗಡಿ ಪ್ರಾಧಿಕಾರಕ್ಕೆ ₹ 500 ಕೋಟಿ ನೀಡಿ

ಬೀದರ್: ರಾಜ್ಯ ಬಜೆಟ್ ನಲ್ಲಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ 500 ಕೋಟಿ ರೂ. ಅನುದಾನ ಕಲ್ಪಿಸಿ ಗಡಿ ಭಾಗದ ಜನರಿಗೆ ವಿವಿಧ ಸೌಲಭ್ಯ ಕಲ್ಪಿಸುವ ಜತೆಗೆ ನಾನಾ ಸಮಸ್ಯೆಗಳಿಗೆ ಸ್ಪಂದಿಸುವಂತೆ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಪೂಜ್ಯರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬೇಡಿಕೆ ಮಂಡಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರ ನಿಯೋಗ ಪೂಜ್ಯರು ಬರೆದ ಮನವಿ ಪತ್ರ ಸಲ್ಲಿಸಿದೆ. ರಾಜ್ಯದ ಗಡಿ ಭಾಗದಲ್ಲಿ ಗುರುತಿಸಿರುವ 63 ತಾಲೂಕುಗಳ ಸಮಗ್ರ ವಿಕಾಸ ಹಾಗೂ 6 ನೆರೆ ರಾಜ್ಯಗಳಲ್ಲಿನ ಗಡಿಗೆ ಹೊಂದಿಕೊಂಡ ಜನರ ಹಿತದಿಂದ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ರಾಜ್ಯದ ಗಡಿ ಭಾಗದಲ್ಲಿ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಪರ ಸಂಘ-ಸಂಸ್ಥೆಗಳು, ಕನ್ನಡ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮಠಗಳ ಸಮಸ್ಯೆ ಸವಾಲು ಸಾಕಷ್ಟಿವೆ. ಗಡಿ ಭಾಗಗಳು ಅನೇಕ ಮೂಲಸೌಲಭ್ಯಗಳಿಂದಲೂ ವಂಚಿತವಾಗಿವೆ. ಇಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳುವ ಜತೆಗೆ ಕನ್ನಡ ಉಳಿಸಿ ಬೆಳೆಸುವ ದಿಸೆಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳುವುದು ತೀರ ಅಗತ್ಯವಿದೆ ಎಂದು ಗಮನ ಸೆಳೆಯಲಾಗಿದೆ.

ಗಡಿ ಪ್ರಾಧಿಕಾರದ ವ್ಯಾಪ್ತಿಗೆ 63 ತಾಲೂಕುಗಳು ಬರುತ್ತವೆ. 6 ನೆರೆ ರಾಜ್ಯಗಳ ಗಡಿಗೆ ಅಂಟಿಕೊಂಡ ಪ್ರದೇಶಗಳು ಸಹ ಸೇರಿವೆ. ಇಲ್ಲಿ ಕನ್ನಡದ ಕೆಲಸದಲ್ಲಿ ಸಕ್ರಿಯ ತೊಡಗಿರುವ ಸಂಘ-ಸಂಸ್ಥೆ ಹಾಗೂ ಮಠಗಳಿಗೆ ಪ್ರೋತ್ಸಾಹ ನೀಡುವುದು ಸರ್ಕಾರದ ಕರ್ತವ್ಯ. ಇದರೊಂದಿಗೆ ಕನ್ನಡ ಶಾಲೆಗಳಿಗೆ ಎಲ್ಲ ಸೌಕರ್ಯ, ಅಗತ್ಯ ಶಿಕ್ಷಕರ ನೇಮಕ, ಗ್ರಂಥಾಲಯ, ಶಾಲಾ ಕಟ್ಟಡ ನಿರ್ಮಾಣ, ಶೌಚಗೃಹ ನಿರ್ಮಾಣಕ್ಕೆ ಆದ್ಯತೆ ಕೊಡಬೇಕಿದೆ. ಸಾಂಸ್ಕೃತಿಕ ಭವನ, ಅಗತ್ಯ ರಸ್ತೆ, ಕುಡಿಯುವ ನೀರು ಪೂರೈಕೆ ಮುಂತಾದ ಮೂಲಸೌಲಭ್ಯ ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸಬೇಕು. ಕನ್ನಡ, ಸಾಂಸ್ಕೃತಿಕತೆ ವಿಚಾರ ಸಂಕಿರಣ ಆಯೋಜನೆ ಮೂಲಕ ಕನ್ನಡ ನಾಡು, ನುಡಿ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹೀಗಾಗಿ ಇದಕ್ಕೆಲ್ಲ ಯೋಜನೆ ರೂಪಿಸಲು ಬಜೆಟ್ನಲ್ಲಿ 500 ಕೋಟಿ ರೂ. ಪ್ರಾಧಿಕಾರಕ್ಕೆ ಒದಗಿಸಲು ಮನವಿ ಮಾಡಿದೆ.

ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಎನ್ನೆಸ್ಸೆಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಇತರರಿದ್ದರು.