ಬೀದರ್: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್ ಗೆ ಬಂದ್ಗೆ ಗಡಿ ಜಿಲ್ಲೆ ಬೀದರ್ ನಲ್ಲಿ ಬೆಂಬಲ ಸಿಗಲಿಲ್ಲ. ಹೀಗಾಗಿ ಕೆಲವು ಸಂಘಟನೆಗಳ ಪ್ರತಿಭಟನೆ ಮಾತ್ರ ಈ ಹೋರಾಟ ಸೀಮಿತವಾಯಿತು.
ನಗರ ಸೇರಿದಂತೆ ಜಿಲ್ಲಾದ್ಯಂತ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ, ಖಾಸಗಿ ವಾಹನ, ಆಟೊಗಳ ಓಡಾಟ ಎಂದಿನಂತೆ ಇತ್ತು. ಹೋಟೆಲ್, ಸಿನಿಮಾ ಮಂದಿರ, ಅಂಗಡಿ, ಮುಂಗಟ್ಟುಗಳು ತೆರೆದಿದ್ದ ಕಾರಣ ಸಾಮಾನ್ಯ ಜನಜೀವನ ಸಹಜವಾಗಿತ್ತು. ಬಂದ್ ಗೆ ಕರೆ ನೀಡಲಾಗಿದೆ ಎಂಬ ವಿಷಯವೇ ಬಹುತೇಕ ಜನರಿಗೆ ಗೊತ್ತಿಲ್ಲ ಎಂಬಂಥ ವಾತಾವರಣ ಕಂಡುಬಂತು. ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ವಿವಿಧೆಡೆಯಿರುವ ಪ್ರಮುಖ ವೃತ್ತಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಲ ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.
ಕೆಲವು ಸಂಘಟನೆಗಳು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನಾ ರ್ಯಾಲಿ ನಡೆಸಿದವಾದರೂ ಪದಾಧಿಕಾರಿಗಳ, ಕಾರ್ಯಕರ್ತರ ಸಂಖ್ಯೆ ಗಣನೀಯ ಕಡಿಮೆಯಿತ್ತು. ಹೀಗಾಗಿ ನಾಮಕೇವಾಸ್ತೆ ಮೆರವಣಿಗೆ ನಡೆದವು. ಯಾವುದೇ ಪ್ರಮುಖ ಸಂಘಟನೆಗಳು ಬಂದ್ ಗೆ ಸಾಥ್ ನೀಡದ ಕಾರಣ ನೀರಸವಾಗಿತ್ತು. ಎಸ್ಪಿ ಡಿ.ಎಲ್.ನಾಗೇಶ, ಹೆಚ್ಚುವರಿ ಎಸ್ಪಿ ಡಾ. ಗೋಪಾಲ್ ಬ್ಯಾಕೋಡ, ಡಿವೈಎಸ್ಪಿ ಬಸವೇಶ್ವರ ಹೀರಾ ವಿವಿಧೆಡೆ ಸುತ್ತಾಡಿ ಸ್ಥಿತಿಗತಿ ಅವಲೋಕನ ನಡೆಸಿದರು.
ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ, ವೀರ ಕನ್ನಡಿಗರ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯ) ಸೇರಿದಂತೆ ಇತರೆ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಹೋರಾಟಗಾರರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸರ್ಕಾರಕ್ಕೆ ನಾಡು, ನುಡಿ ಬಗ್ಗೆ ಕಾಳಜಿ ಇಲ್ಲ. ಸ್ವಾರ್ಥಕ್ಕಾಗಿ ಒಡೆದಾಡುವ ನೀತಿ ಮಾಡುತ್ತಿದೆ. ಸದಾ ಕನ್ನಡ ಹಾಗೂ ರಾಜ್ಯದ ವಿರುದ್ಧ ವಿವಾದವನ್ನು ಸೃಷ್ಟಿಸುವ ಕೆಲಸ ಮಾಡುವ ಮರಾಠಿಗರ ಬಗ್ಗೆ ಸರ್ಕಾರ ಮೃದು ಧೋರಣೆ ತಾಳುವುದು ಸರಿಯಲ್ಲ. ಕೂಡಲೇ ಮರಾಠಾ ನಿಗಮ ರಚನೆ ಆದೇಶ ಹಿಂಪಡೆಯಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಅನುದಾನ ಒದಗಿಸಲು ಆಗ್ರಹಿಸಿದರು.
ರಾಜ್ಯಪಾಲರು, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಎಸಿ ಗರೀಮಾ ಪನ್ವಾರ್ ಅವರಿಗೆ ಸಲ್ಲಿಸಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಶಿವಕುಮಾರ ತುಂಗಾ, ಸ್ವಾಮಿದಾಸ ಕೆಂಪೆನೋರ್, ಶಶಿಕಾಂತ ಪೊಲೀಸ್ ಪಾಟೀಲ್, ಎಂ.ಡಿ.ಮುಸ್ತಾನಮುಲ್ಲಾ, ಸುಬ್ಬಣ್ಣ ಕರಕನಳ್ಳಿ, ಸಾಯಿ ಸಿಂಧೆ, ಸೂರ್ಯಕಾಂತ ಸಾಧುರೆ, ಮುಖೇಶ ಶಾಹಗಂಜ್, ಪ್ರಕಾಶ, ಜೈಭೀಮ, ವಿಶಾಲ ಇತರರಿದ್ದರು.
ರಾಜಕೀಯ ಲಾಭಕ್ಕಾಗಿ ನಿಗಮ
ರಾಜಕೀಯ ಲಾಭಕ್ಕಾಗಿ ಸರ್ಕಾರ ಜಾತಿ, ಭಾಷೆಗೊಂದು ನಿಗಮ, ಪ್ರಾಧಿಕಾರ ರಚನೆ ಮಾಡುವ ಮೂಲಕ ಕನ್ನಡ ನಾಡಿಗೆ ಹಾಗೂ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಡಿಸಿ ಕಚೇರಿ ಎದುರು ಏರ್ಪಡಿಸಿದ ರ್ಯಾಲಿಯಲ್ಲಿ ಮಾತನಾಡಿದ ಮುಖಂಡರು, ಮರಾಠಾ ನಿಗಮ ರಚನೆ ವಿಷಯದಲ್ಲಿ ಸರ್ಕಾರ ಯಾರಿಗೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಬೆಳಗಾವಿ ಲೋಕಸಭಾ ಹಾಗೂ ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಸಂಬಂಧ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸರ್ಕಾರ ಈ ಕೆಲಸ ಮಾಡಿದೆ ಎಂದು ಟೀಕಿಸಿದರು.