ಅರಸೀಕೆರೆ: ಜೀವದ ಹಂಗು ತೊರೆದು ಗಡಿ ಕಾಯುತ್ತಿರುವ ಯೋಧರ ಸೇವೆ ಅವಿಸ್ಮರಣೀಯ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಬಣ್ಣಿಸಿದರು.
ನಗರದ ವೀರಶೈವ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಯೋಧ ನಮನ-ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಜಿ ಹಾಲಿ ಸೈನಿಕರನ್ನು ಗೌರವಿಸಿ ಮಾತನಾಡಿದರು.ಹೊಂಚು ಹಾಕೀ ಸಂಚು ರೂಪಿಸಿ ದಾಳಿ ಮಸಲತ್ತು ನಡೆಸುವ ನೆರೆಯ ದೇಶದ ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ಭಾರತೀಯ ಸೇನೆ ತೊಡಗಿದೆ. ಕಾರ್ಗಿಲ್ ಯುದ್ಧ,ಪುಲ್ವಾಮಾ ದಾಳಿಗೆ ಪ್ರತಿಯಾಗಿ ಏರಸ್ಟ್ರೈಕ್ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಸೈನಿಕರ ದೇಶ ಸೇವೆಯ ಫಲದಿಂದ ನಾವು ನೆಮ್ಮದಿಯ ರಾತ್ರಿಗಳನ್ನು ಕಳೆಯುವಂತಾಗಿದೆ ಎಂಬುದನ್ನು ಮರೆಯಬಾರದು. ಯೋಧರ ಶಿಸ್ತು, ಸಂಯಮ, ಧೈರ್ಯ, ಆತ್ಮಸ್ಥೈರ್ಯ,ತ್ಯಾಗ ಆತ್ಮಾರ್ಪಣೆ ದೇಶಭಕ್ತಿಯನ್ನು ಎಷ್ಟು ಗುಣಗಾನ ಮಾಡಿದರು ಸಾಲದು. ಪೆಟ್ರಿಯಾಟಿಕ್ ಎನ್ನುವ ಶಬ್ಧಕ್ಕೆ ಅನ್ಯ ರಾಷ್ಟ್ರಗಳಲ್ಲಿ ವಿಭಿನ್ನ ಅರ್ಥವಿದ್ದರೆ ಭಾರತೀಯ ನೆಲದಲ್ಲಿ ಮಾತ್ರ ದೇಶ ದೇಶಭಕ್ತ ಎಂದು ಸಂಬೋಧನೆ ಮಾಡಲಾಗುತ್ತದೆ ಎಂದು ಬಣ್ಣಿಸಿದರು.
ತಾಲೂಕಿನಲ್ಲಿ ಸೈನಿಕ ಶಾಲೆ ಆರಂಭಿಸಲು ನಿರ್ಧರಿಸಿರುವ ಸೈನಿಕರ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇ.ಈ ಸಂಬಂಧ ತಾಲೂಕು ಹಾಗೂ ಜಿಲ್ಲಾಡಳಿದ ಜತೆ ಚರ್ಚಿಸಿ ಮೂಲೆ ಸೇರಿರುವ ಕಡತಕ್ಕೆ ಮರುಜೀವ ನೀಡಲಿದ್ದೇನೆ. ನಗರದ ವ್ಯಾಪ್ತಿಯಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಅವಕಾಶ ಮಾಡಿಕೊಡುವುದಾಗಿ ಹೇಳಿರುವುದು ಸ್ವಾಗತಾರ್ಹ.ಮಿಲಿಟರಿ ಸಿನಿಮಾ ನೋಡಿದ ಮಾತ್ರಕ್ಕೆ ಗೌರವ ನೀಡಬೇಕು ಎನ್ನುವ ಸಂಪ್ರದಾಯ ಸರಿಯಲ್ಲ. ಬದಲಾಗಿ ಜೀವನವಿಡೀ ಹೋರಾಟ ನಡೆಸಿದ ವೀರರನ್ನು ನಿತ್ಯವೂ ಸ್ಮರಿಸುವ ಕೆಲಸವಾಗಬೇಕು.ನಿವೃತ್ತರಾಗಿ ಬರುವ ಯೋಧರನ್ನು ಗೌರವದಿಂದ ಬರಮಾಡಿಕೊಳ್ಳುವ ಜತೆಗೆ ಮುಂದಿನ ವರ್ಷದಿಂದ ಭಾರತ ಮಾತೆಯ ಉತ್ಸವ ಹಮ್ಮಿಕೊಳ್ಳುವುದಾಗಿ ಘೋಷಿಸಿದರು.
ಸ್ಮರಣೆ: ಜಮ್ಮು ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ ನಡೆಸುತ್ತಿದ್ದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿ ಜೀವನದಲ್ಲಿ ಸಂಘಟನೆಯ ಮೂಲಕ ಕರಪತ್ರ ಹಂಚುವ ಕೆಲಸ ಮಾಡಿದ್ದೇನೆ.ನೆರೆಯ ಚೀನಾ ಮಿಲಿಟರಿ ಸದಸ್ಯರ ಸಂಖ್ಯೆಯಲ್ಲಿ ದೊಡ್ಡದಿರಬಹುದು. ಆದರೆ ಭಾರತೀಯ ಸೈನಿಕರ ಅನುಭವ,ತಂತ್ರಗಾರಿಕೆ, ಅರ್ಪಣಾ ಮನೋಭಾವ, ಹೃದಯ ವೈಶಾಲ್ಯತೆ ಮುಂದೆ ನೆರೆಯ ದುಷ್ಟಶಕ್ತಿಗಳ ಆಟ ನಡೆಯದಂತಾಗಿದೆ ಎಂದು ಕೊಂಡಾಡಿದರು.
ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ ಮಾತನಾಡಿ, ತಾಲೂಕಿನ ಇತಿಹಾಸದಲ್ಲಿಯೇ ಇಂತಹದ್ದೊಂದು ಗೌರವ ನಮಗೆ ದೊರೆತಿರಲಿಲ್ಲ. ದೇಶ ಸೇವೆಗೆ ದಣಿವರಿಯದೆ ದುಡಿದ ಪರಿವಾರವನ್ನು ಎನ್.ಆರ್.ಸಂತೋಷ್ ಕುಟುಂಬ ಸದಸ್ಯರು ಸನ್ಮಾನಿಸುತ್ತಿರುವುದನ್ನು ಎಂದಿಗೂ ಮರೆಯಲಾಗದು ಎಂದರು.
ಬಿಎಸ್‌ಎಪ್ ಯೋಧ ಪರಮೇಶ್ ಮಾತನಾಡಿ,ಕೇಂದ್ರದಲ್ಲಿ ಪ್ರಧಾನಿ ಮೋದಿ ನಮಗೆಲ್ಲ ಬೆನ್ನೆಲುಬಾಗಿ ನಿಂತಿದ್ದರೆ,ಇಲ್ಲಿ ಸಂತೋಷ್ ನಮ್ಮನ್ನು ಗುರುತಿಸಿ ಇತಿಹಾಸ ನಿರ್ಮಿಸಿದ್ದಾರೆ. ಸೈನಿಕ ಶಾಲೆಯ ನಿರ್ಮಾಣದ ಕನಸು ನನಸು ಮಾಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ,ಕಳೆದ ಹದಿನೈದು ವರ್ಷದಿಂದ ನಿಮಗೆ ನಿವೇಶನ ನೀಡಲ್ಲವೆಂದರೆ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಬದಲವಣೆ ಜಗದ ನಿಯಮ ಎನ್ನುವ ಸಂಕಲ್ಪ ನಿಮ್ಮದಾಗಬೇಕು.ಶೀಘ್ರದಲ್ಲಿಯೇನಿಮ್ಮ ಕೋರಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.ಆರ್‌ಎಸ್‌ಎಸ್ ಮುಖಂಡ ಕೃಷ್ಣಾಜೀ, ಸಂತೋಷ್ ತಾಯಿ ಗಿರಿಜಮ್ಮ, ಗ್ರಾಮಾಂತರ ಠಾಣೆಯ ಸಿಪಿಐ ರಾಘವೇಂದ್ರ ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್ ಸೇರಿ ಹಲವರು ಮಾತನಾಡಿದರು.
ಇದಕ್ಕೂ ಮುನ್ನ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಯೋಧರನ್ನು ಸಮುದಾಯ ಭವನಕ್ಕೆ ಕರೆದೊಯ್ಯಲಾಯಿತು.ಸಂಘದ ಕಾರ್ಯದರ್ಶಿ ನವೀನ್ ಕುಮಾರ್, ನಿವೃತ್ತ ಯೋಧರಾದ ಕರಿಯಪ್ಪ, ರಾಘವೇಂದ್ರ, ಜಯದೇವಪ್ಪ, ಮೋಹನ್ ಕುಮಾರ್ ಸೇರಿ ಹಲವರು ವೇದಿಕೆಯಲ್ಲಿದ್ದರು.