ಜಿಲ್ಲೆ

ಗಟ್ಟಿಪುರದಲ್ಲಿ ಏಕೈಕ ಬಿಲ್ವಪತ್ರೆ ವನ : ಭಕ್ತರ ಸಂಕಷ್ಟ ದೂರ ಮಾಡುವ ಮಹದೇಶ್ವರ ಕ್ಷೇತ್ರ

ಎಂಎಸ್​. ಸಿದ್ದಲಿಂಗೇಶ್ವರ್​ ಮಾಗಡಿ

ಅಪರೂಪವಾದ ಬಿಲ್ವಪತ್ರೆ ವನ ಇರುವ ಪವಿತ್ರ ಸ್ಥಳವೇ ತಾಲೂಕಿನ ಗಟ್ಟಿಪುರ ಶ್ರೀ ಮಹದೇಶ್ವರ ಕ್ಷೇತ್ರ. ಶ್ರೀ ಮಹದೇಶ್ವರರು ಭೂಲೋಕ ಸಂಚಾರದ ವೇಳೆ ಈ ಕ್ಷೇತ್ರದಲ್ಲಿರುವ ಏಕ ಬಿಲ್ವಪತ್ರೆ ಮರದಡಿ ತಪಸ್ಸು ಮಾಡಿದ ಸ್ಥಳದಲ್ಲಿ ಬಿಲ್ವಪತ್ರೆ ಮರವೊಂದು ಬೆಳೆದು ಇಂದು ಈ ಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ಮರಗಳಿವೆ. ಇದೇ ಬಿಲ್ವಪತ್ರೆ ವನವಾಗಿದೆ.

ಸುಮಾರು 700 ವರ್ಷಗಳ ಹಿಂದೆ ಏಕಬಿಲ್ವಪತ್ರೆಯ ಮರದಡಿ ಹುತ್ತ ಬೆಳೆದ ಸ್ಥಳದಲ್ಲಿ ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಅವರು 1942ರಲ್ಲಿ ಕಾಶಿಯಿಂದ ತಂದ ಲಿಂಗವನ್ನು ಪ್ರತಿಷ್ಠಾಪಿಸಿದರು. ಶಿವಕುಮಾರ ಸ್ವಾಮೀಜಿಗಳು ಈ ಭಾಗದ ಭಕ್ತರ ಮನೆಗೆ ಶಿವಪೂಜೆ ಮತ್ತು ದೇವಾಲಯಗಳ ಉದ್ಘಾಟನೆಗೆ ಬರುತ್ತಿದ್ದಾಗ ಈ ಬಿಲ್ವವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಪತ್ರೆಗಳು ತಾನಾಗಿಯೇ ಶ್ರೀಗಳ ಮೇಲೆ ಬೀಳುತ್ತಿದ್ದವು ಎನ್ನುವುದು ಪವಾಡದಂತಿದೆ.

ಎಲ್ಲ ದೇವರಿಗೂ ಇಲ್ಲಿಯ ಬಿಲ್ವಪತ್ರೆ: ಈ ಬಿಲ್ವಪತ್ರೆಗಳನ್ನು ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಕೋಟಿ ಬಿಲ್ವಾರ್ಚನೆ, ಸಹಸ್ರ ಬಿಲ್ವಾರ್ಚನೆ, ಕಾಶಿಯಾತ್ರೆ ಮಾಡುವ ಭಕ್ತರು ಬದರಿನಾಥ, ಕೇದಾರನಾಥ, ಸಿದ್ಧಗಂಗೆ ಸೇರಿ ಪುಣ್ಯ ಕ್ಷೇತ್ರಕ್ಕೆ ತೆರಳುವವರು, ನಿತ್ಯ ಶಿವಪೂಜೆ ಮಾಡುವವರು ಇಲ್ಲಿಗೆ ಬಂದು ಪತ್ರೆಗಳನ್ನು ಸಂಗ್ರಹಿಸಿಕೊಂಡು ತೆರಳುವುದು ವಿಶೇಷ.

ಪ್ರೇಕ್ಷಣಿಯ ತಾಣವಾಗಿಸಲು ಒತ್ತಾಯ: ಗಟ್ಟಿಪುರದ ಗಳೇವೀರಪ್ಪ ಎಂಬುವರು ಸುಮಾರು 200 ವರ್ಷಗಳ ಹಿಂದೆ ಬಿಲ್ವ ವೃಕ್ಷ ಸಂರಕ್ಷಿಸುವ ಉದ್ದೇಶಕ್ಕಾಗಿ ಗೋಮಾಳದ 5 ಎಕರೆ ಜಮೀನು ಮೀಸಲಿಟ್ಟು ಅಭಿವೃದ್ಧಿಗೊಳಿಸಿದರು. ಇದನ್ನು ಸರ್ಕಾರ ಮತ್ತಷ್ಟು ಅಭಿವೃದ್ಧಿಗೊಳಿಸಿ ಪ್ರೇಕ್ಷಣಿಯ ತಾಣವನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳಿಯ ಗ್ರಾಮಸ್ಥರು ಹಾಗೂ ಭಕ್ತರ ಒತ್ತಾಸೆಯಾಗಿದೆ. ಕಾಡಿನ ಮಧ್ಯದಲ್ಲಿ ಈ ವೃಕ್ಷ ವನ ಇರುವುದರಿಂದ, ಇಲ್ಲಿಗೆ ಬರುವ ಭಕ್ತರು ಮತ್ತೆ ಮನೆಗೆ ತೆರಳಲು ಬೇಸರ ವ್ಯಕ್ತಪಡಿಸುತ್ತಾರೆ. ಅಂತಹ ನಿಸರ್ಗ ಸೌಂದರ್ಯದ ನಡುವೆ ಈ ಕ್ಷೇತ್ರವಿದೆ.

ರೋಗ ನಿವಾರಕ ಸ್ಥಳ: ಹಸುಗಳಿಗೆ ಸಾಂಕ್ರಾಮಿಕ ಕಾಯಿಲೆ ಬಂದರೆ ಕ್ಷೇತ್ರಕ್ಕೆ ತಂದು ಪಂಜಿನ ಸೇವೆ ಮತ್ತು ಗೋ ರಾಭಿಷೇಕ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಲ್ಲದವರು ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮಾಡಿಸುವ ಹರಕೆ ಕಟ್ಟಿಕೊಂಡರೆ ಸಂತಾನ ಭಾಗ್ಯ ದೊರೆಯುತ್ತದೆ. ಕೋರ್ಟ್​ ವ್ಯಾಜ್ಯ, ವ್ಯವಹಾರದಲ್ಲಿ ತಂಟೆ ತಕರಾರು, ಕುಟುಂಬ ಕಲಹ, ದಾಂಪತ್ಯ, ಮಕ್ಕಳ ಕಲಹ ಸೇರಿ ಅನೇಕ ಸಮಸ್ಯೆಗಳಿಗೆ ಕ್ಷೇತ್ರದಲ್ಲಿ ಪರಿಹಾರ ಸಿಗಲಿದೆ. ಇದನ್ನು ಇಂದಿಗೂ ಕಾಣಬಹುದಾಗಿದೆ. ಇಷ್ಟೆಲ್ಲಾ ವಿಶೇಷತೆ, ವೈಶಿಷ್ಟ$್ಯತೆ ಉಳ್ಳ ಮಹದೇಶ್ವರ ಸ್ವಾಮಿ ಶಿವಲಿಂಗಕ್ಕೆ ತುಪ್ಪಾಭಿಷೇಕ ಮಾಡಿದರೆ ಬೆಣ್ಣೆಯಾಗಿ ಬದಲಾಗುತ್ತದೆ. ಈ ಬೆಣ್ಣೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಇದು ಇಲ್ಲಿನ ಮಹಿಮೆಯಾಗಿದೆ.

ಪೂಜೆ: ಪ್ರತಿ ಅಮಾವಾಸ್ಯೆಯಲ್ಲಿ ದೇವರಿಗೆ ತುಪ್ಪಾಭಿಷೇಕ, ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ ನಡೆಯುತ್ತದೆ. ಮಹದೇಶ್ವರ ಸನ್ನಿಧಿಯಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಭಕ್ತರಿಗೆ ದೇವಾಲಯದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಹರಕೆ ಹೊತ್ತ ಭಕ್ತರು ದೀಪಾವಳಿ ಹಬ್ಬದಂದು ಹಾಲರವಿ ಉತ್ಸವ ಹಾಗೂ ತಲೆಮುಡಿ, ಬಾಯಿ ಬೀಗ, ಧೂಪದ ಸೇವೆ, ದಿಂಡುಳ್ಳ ಸೇವೆಯಲ್ಲಿ ಭಾಗಿಯಾಗುತ್ತಾರೆ.

ತಲುಪುವುದು ಹೇಗೆ?: ಮಾಗಡಿಯಿಂದ 13 ಕಿ.ಮೀ., ರಾಮನಗರದಿಂದ 23 ಕಿ.ಮೀ., ಕುಣಿಗಲ್​ನಿಂದ 30 ಕಿಮೀ. ದೂರದಲ್ಲಿ ಈ ಕ್ಷೇತ್ರವಿದ್ದು, ಮಾಗಡಿ, ಕುಣಿಗಲ್​, ರಾಮನಗರದಿಂದ ಬಸ್​ ಸೌಲಭ್ಯ ಇದೆ.

ಸೌಕರ್ಯ ಬೇಕಿದೆ: ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿ ಪ್ರತಿನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಭಕ್ತರ ಅನುಕೂಲಕ್ಕಾಗಿ ಟ್ರಸ್ಟ್​ ವತಿಯಿಂದ ಸುಮಾರು 2 ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಕೆಲವು ಸಮಯದಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡಿದಾಗ ವಸತಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಕ್ಷೇತ್ರದಲ್ಲಿ ಮತ್ತಷ್ಟು ವಸತಿ ಗೃಹಗಳು, ಶೌಚಗೃಹ ನಿರ್ಮಾಣವಾಗಬೇಕು ಎಂಬುದು ಭಕ್ತರ ಮನವಿಯಾಗಿದೆ.

ಮಹದೇಶ್ವರ ಸ್ವಾಮಿ ಬಿಲ್ವಪತ್ರೆ ವನಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಒದಗಿಸಿದರೆ, ಕ್ಷೇತ್ರ ಪ್ರಖ್ಯಾತಿ ಹೊಂದುವುದಲ್ಲದೆ, ಸುತ್ತಮುತ್ತಲ ನೂರಾರು ಗ್ರಾಮಗಳೂ ಅಭಿವೃದ್ಧಿಯಾಗಲಿವೆ. ಜಿ.ಡಿ. ಶಿವರುದ್ರಯ್ಯ, ಅರ್ಚಕ