ಉಪ್ಪಿನಬೆಟಗೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಕ್ಕದ ಪ್ರಮುಖ ರಸ್ತೆಯಲ್ಲಿ ಒಂದು ತಿಂಗಳಿಂದ ಮಳೆ ನೀರು ಹಾಗೂ ಅಕ್ಕ ಪಕ್ಕದ ಮನೆಗಳ ದಿನಬಳಕೆಯ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಗ್ರಾಮಸ್ಥರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ವಣವಾಗಿದೆ.
ಬಸ್ ನಿಲ್ದಾಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಡಾ.ಎನ್.ಎಸ್. ಗಚ್ಚಿನಮಠ ಆಸ್ಪತ್ರೆಗೆ ತೆರಳಲು ಮುಖ್ಯ ರಸ್ತೆಯಾಗಿದ್ದರಿಂದ ಜನ ಸಂಚಾರ ಹೆಚ್ಚಿರುತ್ತದೆ. ಈ ಮೊದಲು ರಸ್ತೆ ಸುತ್ತಲಿನ ಮನೆಗಳ ಬಳಕೆ ನೀರು ಹಾಗೂ ಮಳೆ ನೀರು ಹೋಗಲು ಗ್ರಾಪಂನವರು ಅಲ್ಲಲ್ಲಿ ಚೆಂಬರ್ ಅಳವಡಿಸಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಾಗದಲ್ಲಿ ಪೈಪ್ಲೈನ್ ಮೂಲಕ ಪ್ರಮುಖ ರಸ್ತೆಯ ಗಟಾರಿಗೆ ಹೋಗುವಂತೆ ಮಾಡಿದ್ದರು. ಆದರೆ, ಕಳೆದ ಕೆಲ ದಿನಗಳ ಹಿಂದೆ ಸಹಕಾರ ಸಂಘದವರು ತಮ್ಮ ಜಾಗದಲ್ಲಿ ಗೋದಾಮು ಕಟ್ಟಡ ನಿರ್ವಿುಸಲು ಅಡಿಪಾಯ ತೆಗೆಯುವಾಗ ಪೈಪ್ಲೈನ್ ಒಡೆದಿದೆ. ಅದಕ್ಕೆ ಮುಚ್ಚಳ ಹಾಕಿ ಬಂದ್ ಮಾಡಿದ್ದಾರೆ. ಇದರಿಂದ ನೀರು ಚೆಂಬರ್ ಮೂಲಕ ಮೇಲೆ ಬಂದು ಕೆರೆಯಂತಾಗಿ ದುರ್ವಾಸನೆ ಬೀರುತ್ತಿದೆ. ಈ ಕುರಿತು ಗ್ರಾಪಂಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ, ಗಟಾರು ನೀರು ನಿಂತಿರುವ ಫೋಟೋಗಳನ್ನು ತಾಪಂ ಇಒ ಎಸ್.ಎಸ್. ಕಾದ್ರೊಳ್ಳಿ ಅವರ ವಾಟ್ಸ್ಯಾಪ್ಗೆ ಕಳುಹಿಸಿದರೂ ಕ್ರಮಕೈಗೊಂಡಿಲ್ಲ ಎಂದು ಜನ ದೂರುತ್ತಿದ್ದಾರೆ.
ಮಳೆ ಹಾಗೂ ದಿನಬಳಕೆ ನೀರು ಸರಾಗವಾಗಿ ಹರಿದು ಹೋಗುವಂತೆ ಗಟಾರ ನಿರ್ವಿುಸಿ ಎಂದು ಸಾಕಷ್ಟು ಬಾರಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೆಲ ದಿನಗಳ ಹಿಂದೆ ಮೋಟರ್ ಮೂಲಕ ನೀರು ಹೊರ ಸಾಗಿಸಿ ಮತ್ತೆ ಹಾಗೆ ಬಿಟ್ಟಿದ್ದಾರೆ. ಹೀಗಾಗಿ ನೀರು ಸಂಗ್ರಹವಾಗಿ ಕೆರೆಯಂತಾಗಿದೆ.| ರವೀಂದ್ರ ಯಲಿಗಾರ ಸ್ಥಳಿಯ ನಿವಾಸಿ
ನೀರು ನಿಲ್ಲುವ ಬಗ್ಗೆ ಮಾಹಿತಿ ಇದ್ದು, ತುರ್ತಾಗಿ ಗಟಾರು ನಿರ್ವಿುಸುವುದು ಸ್ವಲ್ಪ ಕಷ್ಟ. ಸಂಗ್ರಹವಾಗುವ ನೀರನ್ನು ಸದ್ಯದ ಮಟ್ಟಿಗೆ ಮೋಟಾರ್ ಮೂಲಕ ಸಾಗಿಸುವಂತೆ ಗ್ರಾಪಂ ಪಿಡಿಒಗೆ ತಿಳಿಸಿದ್ದೇನೆ ಮತ್ತು ಆದಷ್ಟು ಬೇಗನೆ ಗಟಾರು ನಿರ್ವಿುಸಿ ಸಮಸ್ಯೆ ಬಗೆಹರಿಸಲಾಗುವುದು. | ಎಸ್.ಎಸ್. ಕಾದ್ರೊಳ್ಳಿ ತಾಪಂ ಇಒ ಧಾರವಾಡ